''ಬೆಳಗಾವಿ ಉಪ ಚುನಾವಣೆಗೆ ಕಾಂಗ್ರೆಸ್‍ನಿಂದ ಇಬ್ಬರ ಹೆಸರು ಅಂತಿಮ''

Update: 2020-12-29 16:30 GMT

ಬೆಳಗಾವಿ, ಡಿ.29: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‍ನಿಂದ ಇಬ್ಬರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮಂಗಳವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಮೂರು ಹೆಸರುಗಳನ್ನು ಸೂಚಿಸಲಾಗಿತ್ತು. ಅದರಲ್ಲಿ ಇಬ್ಬರ ಹೆಸರುಗಳು ಅಂತಿಮವಾಗಿದೆ ಎಂದು ಹೇಳಿದರು. ಹೆಸರು ಬಹಿರಂಗಪಡಿಸಲು ನಿರಾಕರಿಸಿ, ನನ್ನ ಹೆಸರಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಪಕ್ಷದ ಚಿಹ್ನೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರು ಸಮಿತಿ ರಚಿಸಿದ್ದಾರೆ. ಡಿ.31ರಂದು ಬೆಂಗಳೂರಿನಲ್ಲಿ ಈ ವಿಚಾರವಾಗಿ ಸಭೆ ಇದೆ. ಅಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದರು.

ಬೆಳಗಾವಿ ಪಾಲಿಕೆ ಎದುರು ಕನ್ನಡ ಭಾವುಟ ಹಾರಿಸಿರುವ ಬಗ್ಗೆ ಜಿಲ್ಲಾಡಳಿತವೇ ನಿರ್ಧಾರ ಮಾಡಬೇಕು. ಅನವಶ್ಯ ಸಮಸ್ಯೆ ಹುಟ್ಟು ಹಾಕದೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.

ಧರ್ಮೇಗೌಡರ ಸಾವು ಜನರ ಮೇಲೂ ಪರಿಣಾಮ ಬೀರುತ್ತದೆ

‘ಉಪ ಸಭಾಪತಿ ಧರ್ಮೇಗೌಡ ಅವರು ಈ ರೀತಿ ನಿರ್ಧಾರಕ್ಕೆ ಕೈ ಹಾಕಬಾರದಿತ್ತು. ಆತ್ಮಹತ್ಯೆ ಪ್ರಕರಣವನ್ನು ವಿಧಾನಪರಿಷತ್‍ನಲ್ಲಿ ನಡೆದ ಗಲಾಟೆಗೆ ಜೋಡಿಸಬೇಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಜನ ನಾಯಕರು ಹೀಗೆ ಮಾಡಿದರೆ ಜನಸಾಮಾನ್ಯರ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ ಎಂದು ಹೇಳಿದರು.’

-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News