ಕೊರೋನ ಸಂಕಷ್ಟದ ನಡುವೆಯೂ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ಕರ್ನಾಟಕ ಪ್ರಥಮ: ಜಗದೀಶ್ ಶೆಟ್ಟರ್

Update: 2020-12-29 17:30 GMT

ಬೆಂಗಳೂರು, ಡಿ.29: ಕೊರೋನ ಸಂಕಷ್ಟದ ನಡುವೆಯೂ ಬಂಡವಾಳ ಹೂಡಿಕೆ ಪ್ರಸ್ತಾವದಲ್ಲಿ ದೇಶದಲ್ಲಿ ನಮ್ಮ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಮಾಹಿತಿ ಅನ್ವಯ, ನಮ್ಮ ರಾಜ್ಯದಲ್ಲಿ 1,54,937 ಕೋಟಿ ರೂ.ಮೊತ್ತದ 95 ಹೂಡಿಕೆಯ ಪ್ರಸ್ತಾವನೆಗಳು ನೋಂದಣಿಯಾಗಿವೆ. ಈ ಮೂಲಕ ನಮ್ಮ ರಾಜ್ಯವು ಹೂಡಿಕೆ ಪ್ರಸ್ತಾವದ ವಿಚಾರದಲ್ಲಿ ದೇಶದಲ್ಲಿಯೆ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಮಂಗಳವಾರ ನಗರದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ “ಮುಕ್ತ ಅವಕಾಶದ ಮೂಲಕ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಶಕ್ತಿಯನ್ನು ಪೂರೈಸುವ” ಬಗ್ಗೆ ಅಸೋಚಾಮ್ (ASSOCHAM) ಆಯೋಜಿಸಿದ್ದ ವೆಬಿನಾರನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯವನ್ನು ದೇಶದಲ್ಲಿ ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಫಲವಾಗುತ್ತಿರುವುದು ಈ ಮೂಲಕ ಗೋಚರವಾಗುತ್ತಿವೆ. ಅಲ್ಲದೆ, 2019ರ ಆಗಸ್ಟ್ ನಿಂದ 2020ರ ಡಿಸೆಂಬರ್ ನಡುವೆ ರಾಜ್ಯ ಉನ್ನತ ಮಟ್ಟದ ಸಮಿತಿ ಹಾಗೂ ರಾಜ್ಯ ಉನ್ನತ ಮಟ್ಟದ ಏಕಗವಾಕ್ಷಿ ಸಮಿತಿಯ ಮೂಲಕ 410 ನೂತನ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಅನುಮತಿಗಳ ಮೂಲಕ ರಾಜ್ಯದಲ್ಲಿ 82,015 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, 2,27,147 ಉದ್ಯೋಗಾವಕಾಶಗಳ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ರಾಜ್ಯವು ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿದ್ದು, ಇವಿ ಹಾಗೂ ಡಾಟಾ ಸೆಂಟರ್ ಗಳಂತಹ ಕ್ಷೇತ್ರಗಳಿಗೆ ವಿದ್ಯುತ್‍ನ ಬೇಡಿಕೆ ಹೆಚ್ಚಾಗುತ್ತಿದೆ. ರಾಜ್ಯದ ಇಂಧನ ಕ್ಷೇತ್ರದಲ್ಲಿ ಸುಧಾರಣೆಗೆ ವಿಫುಲ ಅವಕಾಶಗಳಿವೆ. ನಾವು ಕೈಗಾರಿಕೆಗಳ ವಿದ್ಯುತ್ ಉಪಯೋಗದ ಖರ್ಚು ವೆಚ್ಚಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ನಾವು ಎಸ್ಕಾಂಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದು, ಕ್ರಾಸ್ ಸಬ್ಸಿಡಿ ಸರ್‍ಚಾರ್ಜ್, ವ್ಹೀಲಿಂಗ್ ಚಾರ್ಜಸ್‍ನಂತಹ ವಿಷಯಗಳನ್ನು ಗುರುತಿಸಿದ್ದೇವೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಪ್ರಸ್ತುತ ನಾವು ನಿರಂತರ ವಿದ್ಯುತ್ ಪೂರೈಕೆಗೆ ಗ್ರಿಡ್‍ಗಳ ಮೇಲೆ ಅವಲಂಬಿತರಾಗಿದ್ದು ತಾಂತ್ರಿಕ ಸಮಸ್ಯೆಗಳಿಂದ ಇದನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ನೂತನ ಬ್ಯಾಟರಿ ಸ್ಟೋರೇಜ್ ಸೌಕರ್ಯವನ್ನು ಗ್ರಿಡ್‍ಗಳ ಬಳಿ ನಿರ್ಮಾಣ ಮಾಡುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದಾಗಿದ್ದು, ಇದರ ಬಗ್ಗೆ ಚಿಂತನೆ ನಡೆದಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News