ಬ್ಯಾಂಕ್‍ಗಳು ಕನ್ನಡದಲ್ಲಿಯೇ ಗ್ರಾಹಕ ಸೇವೆ ನೀಡಲಿ: ಟಿ.ಎಸ್.ನಾಗಾಭರಣ ಆಗ್ರಹ

Update: 2020-12-29 17:31 GMT

ಬೆಂಗಳೂರು, ಡಿ.29: ರಾಜ್ಯದ ಎಲ್ಲಾ ಬ್ಯಾಂಕುಗಳು ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವುದು ಈ ನೆಲದ ಹಕ್ಕೊತ್ತಾಯ. ಹಾಗೂ ಕೇಂದ್ರ ಸರಕಾರದ ಭಾಷಾ ನೀತಿಯಾಗಿದ್ದು, ಎಲ್ಲ ಬ್ಯಾಂಕ್‍ಗಳು ಸಂಪೂರ್ಣವಾಗಿ ಕನ್ನಡದಲ್ಲಿಯೇ ಗ್ರಾಹಕ ಸೇವೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಆಗ್ರಹಿಸಿದ್ದಾರೆ.

ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಟೌನ್ ಹಾಲ್ ಬಳಿಯಿರುವ ರಾಜ್ಯಮಟ್ಟದ ಮಾರ್ಗದರ್ಶಿ ಬ್ಯಾಂಕ್(ಎಸ್‍ಎಲ್‍ಬಿಸಿ) ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಕುರಿತಾದ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಡಿದರು.

ಈ ನೆಲದ ನೀತಿಯನ್ನು ಪಾಲಿಸುವುದು ಎಲ್ಲಾ ಬ್ಯಾಂಕುಗಳ ಗುರುತರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಶ್ರಮದ ಹಣದಲ್ಲಿ ಬ್ಯಾಂಕ್‍ಗಳಲ್ಲಿ ವ್ಯವಹರಿಸುತ್ತಾರೆ. ಅಂತಹ ಗ್ರಾಹಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸರಕಾರದ ನೀತಿ-ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದರೂ ಬಹುತೇಕ ಬ್ಯಾಂಕುಗಳು ನಿಯಮ ಉಲ್ಲಂಘಿಸುತ್ತಿವೆ. ಅಲ್ಲದೆ, ಕನ್ನಡದ ನೆಲದಲ್ಲಿ ಅನ್ಯಭಾಷೆಗಳನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ. ಬ್ಯಾಂಕ್‍ಗಳ ಕನ್ನಡ ವಿರೋಧಿ ಮನಸ್ಥಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ರಾಜ್ಯ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥರಿಗೆ ಹಕ್ಕೊತ್ತಾಯದ ಮನವಿಯನ್ನು ವಿತರಿಸಿದರು. ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ.ಅಬ್ದುಲ್ ರೆಹಮಾನ್ ಪಾಷಾ, ಕಾರ್ಯದರ್ಶಿ ಡಾ.ಕೆ.ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಕನ್ನಡಪರ ಚಿಂತಕರು, ಕನ್ನಡ ಕಾಯಕ ಪಡೆಯ ಸದಸ್ಯರುಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News