ಧರ್ಮೇಗೌಡ ಅವರ ಸಾವಿನಲ್ಲೂ ರಾಜಕಾರಣ ಸರಿಯಲ್ಲ: ಶಾಸಕ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು, ಡಿ. 29: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂದು ನಮಗೆ ತಿಳಿದಿಲ್ಲ. ಸಾವಿನಲ್ಲಿಯೂ ಪ್ರತಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡುತ್ತಾರೆಂದರೆ ಅದೊಂದು ಅತ್ಯಂತ ಕೀಳುಮಟ್ಟದ ರಾಜಕಾರಣ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ನಡೆದ ಪರಿಷತ್ ಅಧಿವೇಶನದಲ್ಲಿ ಅವರನ್ನು ಬಲವಂತವಾಗಿ ಬಿಜೆಪಿ ಸಭಾಪತಿ ಆಸನದಲ್ಲಿ ಕೂರಿಸಿಲ್ಲ. ಆದರೆ, ಇವರು ಸಾವಿನಲ್ಲಿ ಕಾಂಗ್ರೆಸ್‍ನವರು ಬಿಜೆಪಿ ಬಗ್ಗೆ ಆಪಾದನೆ, ಅಪಪ್ರಚಾರ ಮಾಡುತ್ತಿದ್ದಾರೆ. ಅವರು ನಡೆದುಕೊಂಡ ರೀತಿ ರಾಜ್ಯದ ಪರಿಷತ್‍ನ ಪರಂಪರೆ, ಇತಿಹಾಸ, ಘನತೆಯನ್ನು ಹಾಳು ಮಾಡಿದ್ದು ಕಾಂಗ್ರೆಸ್‍ನವರು ಎಂದು ವಾಗ್ದಾಳಿ ನಡೆಸಿದರು.
ಈ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆದರೆ, ನಡೆದಂತಹ ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಅದನ್ನು ಪರಿಷತ್ ನಿಯಮದಂತೆ ಸಭೆಯಲ್ಲಿ ಖಂಡಿಸುವ ಬದಲು ಗೂಂಡಾಗಿರಿ ಮಾಡಿದರು. ಕಾಂಗ್ರೆಸ್ ಎಂದರೆ ಗೂಂಡಾ ಸಂಸ್ಕೃತಿ ಎಂಬುದು ಜಗಜ್ಜಾಹೀರಾಯಿತು ಎಂದು ರೇಣುಕಾಚಾರ್ಯ ದೂರಿದರು.
ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿ, ಮಾಜಿ ಮುಖ್ಯಮಂತ್ರಿಗಳಾಗಿ, ಹಣಕಾಸು ಸಚಿವರಾಗಿದ್ದವರು, ಅವರು ದನ ತಿನ್ನುತ್ತೇನೆ, ಹಸು ತಿನ್ನುತ್ತೇನೆ ಎಂಬ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏನಾದರೂ ತಿನ್ನಿರಿ ಅದು ಗೋಹತ್ಯೆ. ಈ ಮೂಲಕ ಅವರು ಬಹುಸಂಖ್ಯಾತರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ರಾಮಮಂದಿರದ ಬಗ್ಗೆ ಕೇಂದ್ರ ನಾಯಕರು ನಡೆದುಕೊಂಡ ರೀತಿ, ಹಿಂದೂಗಳಿಗೆ ಅಪಮಾನ ಮಾಡಿದ್ದು, ಎರಡು ಬಾರಿ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಸಿಗಲಿಲ್ಲ. ಇದೇ ರೀತಿ ರಾಜ್ಯದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಿದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ಮೀನು ತಿಂದೆ ಎಂದು ಹೇಳಿದ್ದರು, ಇದಕ್ಕೆ ಜನ ತಕ್ಕಪಾಠ ಕಲಿಸಿದರು. ಆದರೆ, ಪ್ರಧಾನಿ ಮೋದಿಯವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಪಾವಿತ್ರ್ಯತೆಯಿಂದ ನಡೆದುಕೊಂಡು ದೇಶದ ಜನತೆಗೆ ಒಳ್ಳೆಯದಾಗಲಿ ಎಂದು ಹರಸಿ ಎಳೆನೀರು ಕುಡಿದಿದ್ದರು. ಅದಕ್ಕೆ ಎರಡು ಬಾರಿ ಪ್ರಧಾನಿಯಾದರು ಎಂದು ಅವರು ತಿಳಿಸಿದರು.
ಹನುಮಜಯಂತಿ ದಿನ, ನಾನು ಹಳ್ಳಿ ಮನುಷ್ಯ ತಿಂತೀನಿ ಎಂದು ಹೇಳಿದರು. ತಿನ್ನಲಿ ಬಿಡಿ ಯಾರು ಬೇಡವೆಂದರು. ಟಿಪ್ಪು ಸುಲ್ತಾನ್ ಜಯಂತಿ ಮಾಡಿ ವೈಭವೀಕರಿಸಿದಿರಿ. ರಾಮ, ಹನುಮ ಯಾವಾಗ ಹುಟ್ಟಿದ್ದ ಎಂದು ಪ್ರಶ್ನಿಸುವ ಇವರು ಟಿಪ್ಪು ಸುಲ್ತಾನ್ ಬಗ್ಗೆ ಹೇಳಲಿ ನೋಡೋಣ. ಈ ಮೂಲಕ ಬಹುಸಂಖ್ಯಾರನ್ನು ಅವಮಾನ ಮಾಡುತ್ತಿದ್ದಾರೆ. ಕೇವಲ ವೋಟ್ ಬ್ಯಾಂಕ್‍ಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ, ಇದನ್ನು ಬಿಟ್ಟು ಈ ನಾಡಿನ ಬಹುಸಂಖ್ಯಾತ ಹಿಂದೂಗಳ ಕ್ಷಮೆ ಕೇಳಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು.
'ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ನಿಧನ ತೀವ್ರ ಆಘಾತ ತಂದಿದೆ. ಅವರ ಅಕಾಲಿಕ ನಿಧನದಿಂದ ರಾಜ್ಯವು ಓರ್ವ ಅತ್ಯುತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ದೇವರು ಸದ್ಗತಿ ನೀಡಲಿ. ಅವರ ಕುಟುಂಬ, ಬಂಧುಮಿತ್ರರಿಗೆ ಅವರ ನಿಧನದ ಆಘಾತವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ'
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ