ಮತ ಎಣಿಕೆ ಕೇಂದ್ರದ ಬಳಿ ಪೊಲೀಸರ ವಿರುದ್ಧ ಏಜೆಂಟ್, ಅಭ್ಯರ್ಥಿಗಳಿಂದ ಪ್ರತಿಭಟನೆ
ಚಾಮರಾಜನಗರ, ಡಿ.30: ಮತ ಎಣಿಕೆ ಕೇಂದ್ರದ ಬಳಿ ಏಜೆಂಟ್ ಹಾಗೂ ಅಭ್ಯರ್ಥಿಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಮತ ಏಣಿಕೆ ಕೇಂದ್ರದಲ್ಲಿ ಘಟನೆ ನಡೆದಿದ್ದು, ಏಜೆಂಟ್ ಹಾಗೂ ಅಭ್ಯರ್ಥಿಗಳು ಒಳ ಹೋಗುವ ವೇಳೆ ಪೊಲೀಸರ ನಡುವೆ ಮಾತಿನ ಚಕಮುಖಿ ನಡೆಯಿತು.
ಏಜೆಂಟ್ ಹಾಗೂ ಅಭ್ಯರ್ಥಿಗಳನ್ನು ಸಬ್ ಇನ್ಸ್ ಪೆಕ್ಟರ್ ಹನುಮಂತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು. ಕೆಲಕಾಲ ಮತ ಏಣಿಕೆ ಕೇಂದ್ರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರತಿಭಟನೆಗೆ ಮುಂದಾದ ಏಜೆಂಟ್ ಹಾಗೂ ಅಭ್ಯರ್ಥಿಗಳು ಸಬ್ ಇನ್ಸ್ ಪೆಕ್ಟರ್ ಕ್ಷಮೆಯಾಚನೆಗೆ ಆಗ್ರಹಿಸಿದರು.
ಮತ ಏಣಿಕೆ ಸ್ಥಳಕ್ಕೆ ತೆರಳದೇ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ಧಿಕ್ಕಾರ ಕೂಗಿದ ಏಜೆಂಟ್ ಹಾಗೂ ಅಭ್ಯರ್ಥಿಗಳ ಪ್ರತಿಭಟನೆಗೆ ಮಣಿದ ಸಬ್ ಇನ್ಸ್ ಪೆಕ್ಟರ್ ಹನುಮಂತು ಕೊನೆಗೂ ಕ್ಷಮೆಯಾಚಿಸಿದರು ಎಂದು ತಿಳಿದುಬಂದಿದೆ.