ಎಚ್ಚರ...ಕೋವಿಡ್ ಲಸಿಕೆ ಹೆಸರಲ್ಲಿ ನಿಮ್ಮ ಮೊಬೈಲ್‌ಗೂ ಬರಬಹುದು 'ವಂಚನೆಯ ಕರೆ'

Update: 2020-12-30 07:45 GMT
ಸಾಂದರ್ಭಿಕ ಚಿತ್ರ

ಭೋಪಾಲ್, ಡಿ.30: "ಐನೂರು ರೂ. ಪಾವತಿಸಿ ನಿಮ್ಮ ಕುಟುಂಬದವರ ಹೆಸರು ನೋಂದಾಯಿಸಿ. ಮೊದಲ ಹಂತದಲ್ಲೇ ನೀವು ಕೋವಿಡ್-19 ವೈರಸ್ ವಿರುದ್ಧದ ಲಸಿಕೆ ಪಡೆಯಲಿದ್ದೀರಿ" ಎಂಬ ವಂಚನೆಯ ಕರೆ ನಿಮ್ಮ ಮೊಬೈಲ್‌ಗೂ ಬರಬಹುದು.

ಇಂತಹ ವಂಚನಾ ಜಾಲವೊಂದು ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಭೋಪಾಲ್‌ನ ಸಹ್ಯಾದ್ರಿ ಪರಿಸರದಲ್ಲಿರುವ ಕೂಡುಕುಟುಂಬದ ಮೋನಿಕಾ ದುಬೆ ಎಂಬವರಿಗೆ ಬಂದ ಈ ಕರೆ ಬಗ್ಗೆ ವಿಚಾರಿಸಿದಾಗ ಇದು ವಂಚನಾ ಜಾಲ ಎನ್ನುವುದು ಗೊತ್ತಾಗಿದೆ.

ಇನ್ನೊಂದು ಪ್ರಕರಣದಲ್ಲಿ ಭೋಪಾಲ್‌ನ ವಿದ್ಯಾರ್ಥಿಯೊಬ್ಬರಿಗೂ ಇದೇ ರೀತಿ ಕರೆ ಬಂದಿದ್ದು, ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ಕೇಂದ್ರ ಸರ್ಕಾರ ಕೋವಿಡ್ ಲಸಿಕೆಗೆ ಅನುಮತಿ ನೀಡಿದ ತಕ್ಷಣ ಆದ್ಯತೆ ಮೇರೆಗೆ ಲಸಿಕೆ ಪಡೆಯುವ ಉದ್ದೇಶದಿಂದ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನೀಡುವಂತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಕೇಳಿದ್ದಾಗಿ ದೂರು ನೀಡಲಾಗಿದೆ.

ಇಂತಹ ವಂಚನೆ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಸೈಬರ್ ವಿಭಾಗ ಎಚ್ಚರಿಕೆ ನೀಡಿದೆ.

"ಶೀಘ್ರವಾಗಿ ಕೊರೋನ ಲಸಿಕೆ ನೀಡುವ ಆಮಿಷ ಒಡ್ಡುವ ಕರೆಗಳಿಗೆ ಸ್ಪಂದಿಸಿ ಜನ ಓಟಿಪಿ, ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬಾರದು ಅಥವಾ ಯಾವುದೇ ಲಿಂಕ್ ಕ್ಲಿಕ್ ಮಾಡಬಾರದು. ಆನ್‌ಲೈನ್ ವಂಚಕರು ಫಿಶಿಂಗ್ ಮೇಲ್‌ಗಳನ್ನು ಮತ್ತು ಇ-ಮೇಲ್ ಮೂಲಕ ಲಿಂಕ್‌ಗಳನ್ನು, ಸಂದೇಶಗಳನ್ನು ಕಳುಹಿಸುತ್ತಿದ್ದಾರೆ" ಎಂದು ಸೈಬರ್ ಘಟಕದ ಎಸ್ಪಿ ಡಾ.ಗುರುಕರಣ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News