×
Ad

ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ಪಿ.ರವಿಕುಮಾರ್ ನೇಮಕ

Update: 2020-12-30 15:45 IST

ಬೆಂಗಳೂರು, ಡಿ. 30: ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.

ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ನಾಳೆ(ಡಿ.31) ನಿವೃತ್ತಿ ಹೊಂದಲಿದ್ದು, ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ನೂತನ ಮುಖ್ಯ ಕಾರ್ಯದರ್ಶಿಯನ್ನಾಗಿ ಪಿ.ರವಿಕುಮಾರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಮುಲ್ಲೈ ಮುಹೀಲಾನ್ ಎಂ.ಪಿ. ಆದೇಶ ಹೊರಡಿಸಿದ್ದಾರೆ.

1984 ಬ್ಯಾಚ್ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಪಿ.ರವಿಕುಮಾರ್ ಅವರ ಸೇವಾ ಹಿರಿತನವನ್ನು ಪರಿಗಣಿಸಿ ಸರಕಾರದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಅವರು ಇನ್ನೂ ಒಂದುವರೆ ವರ್ಷದ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.

ಆಂಧ್ರಪ್ರದೇಶದ ಮೂಲದ ತೆಲುಗು ಮಾತೃಭಾಷೆಯ ಹಿರಿಯ ಅಧಿಕಾರಿ ಪಿ.ರವಿಕುಮಾರ್ ಅವರು ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸುದೀರ್ಘ ಅವಧಿ ರಾಜ್ಯ ಇಂಧನ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಇರುವ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಹಕಾರ, ವಾಣಿಜ್ಯ ತೆರಿಗೆ, ಕೈಗಾರಿಕೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

2018ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಟಿ.ಎಂ.ವಿಜಯಭಾಸ್ಕರ್ ಅವರು ಅತ್ಯಂತ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದ್ದು, ಇವರ ಅವಧಿಯಲ್ಲಿ ರಾಜ್ಯದಲ್ಲಿ ಭೀಕರ ಸ್ವರೂಪದ ಬರ-ನೆರೆ ಸೇರಿದಂತೆ ಹಲವು ಸಮಸ್ಯೆಗಳು ಹಾಗೂ ಮಹಾಮಾರಿ ಕೊರೋನ ವೈರಸ್ ಸೋಂಕಿನ ವಿರುದ್ಧದ ಹೋರಾಟ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಅದೇ ರೀತಿಯಲ್ಲಿ ಹಿರಿಯ ಐಎಎಸ್ ಅಧಿಕಾರಿಯಾಗಿರುವ ಪಿ.ರವಿಕುಮಾರ್ ಅವರು ರಾಜ್ಯದ ವಿವಿಧ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದು, ಇವರ ಅವಧಿಯಲ್ಲಿ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸೌರಶಕ್ತಿ ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News