ರಾಜ್ಯದ 7 ಮಂದಿಗೆ ರೂಪಾಂತರಿತ ಕೋವಿಡ್ ಸೋಂಕು ದೃಢ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಡಿ.30: ಯು.ಕೆ.ಯಿಂದ ನಮ್ಮ ದೇಶಕ್ಕೆ ಹಿಂದಿರುಗಿರುವ ಪ್ರಯಾಣಿಕರ ಪೈಕಿ 107 ಮಂದಿ ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಅವರನ್ನು ಜೆನೆಟಿಕ್ಸ್ ಪರೀಕ್ಷೆಗೆ ಒಳಪಡಿಸಿದಾಗ 20 ಮಂದಿಗೆ ರೂಪಾಂತರಗೊಂಡಿರುವ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪೈಕಿ ದಿಲ್ಲಿಯಲ್ಲಿ 8 ಜನರಿಗೆ ಹಾಗೂ ನಮ್ಮ ರಾಜ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂವರು ಹಾಗೂ ಶಿವಮೊಗ್ಗದ ನಾಲ್ವರಿಗೆ ರೂಪಾಂತರಗೊಂಡ ಸೋಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವವರ ಸಂಪರ್ಕದಲ್ಲಿದ್ದ 39 ಮಂದಿಯನ್ನು ಪತ್ತೆ ಮಾಡಿದ್ದೇವೆ. ಅವರೆಲ್ಲರಿಗೂ ಪರೀಕ್ಷೆ ಮಾಡಿಸಿದ್ದು, ಯಾರಿಗೂ ಕೂಡ ಸೋಂಕು ತಗುಲದೆ ಇರುವುದು ಸಮಾಧಾನಕರ ಸಂಗತಿ ಎಂದರು.
ಶಿವಮೊಗ್ಗದಲ್ಲಿರುವ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 7 ಜನರ ಪೈಕಿ ಮೂವರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಅವರಿಗೆ ರೂಪಾಂತರಗೊಂಡಿರುವ ಸೋಂಕು ತಗುಲಿದೆಯೆ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ಸರಕಾರಿ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಸೋಂಕಿತರಿಗೆ ಅಗತ್ಯವಿರುವ ಚಿಕಿತ್ಸೆ ನೀಡುತ್ತಿದ್ದೇವೆ. ಎಲ್ಲರೂ ಗುಣಮುಖರಾಗುವ ಆಶಾಭಾವನೆಯಿದೆ. ರೂಪಾಂತರಗೊಂಡಿರುವ ಕೋವಿಡ್ ವೈರಾಣು ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುತ್ತಿದ್ದೇವೆ ಎಂದು ಸುಧಾಕರ್ ಹೇಳಿದರು.
ಕೇಂದ್ರ ಸರಕಾರವು ರೂಪಾಂತರಗೊಂಡಿರುವ ಕೋವಿಡ್ ವೈರಾಣುಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಸಾಂಸ್ಥಿಕ ಕ್ವಾರಂಟೈನ್ ಅನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ರೂಪಾಂತರಗೊಂಡಿರುವ ವೈರಾಣುವಿನ ತೀವ್ರತೆ ಹೆಚ್ಚಿಲ್ಲದಿದ್ದರೂ, ಹರಡುವ ಸಾಮರ್ಥ್ಯ ಶೇ.70ರಷ್ಟು ಹೆಚ್ಚಿದೆ. ಆದುದರಿಂದ, ಈ ವೈರಾಣು ಹರಡದಂತೆ ನಿಯಂತ್ರಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಯು.ಕೆ.ಯಿಂದ ಬಂದು ನಾಪತ್ತೆಯಾಗಿರುವವರನ್ನು ಪತ್ತೆ ಹಚ್ಚಲು ಗೃಹ ಇಲಾಖೆ ಕ್ರಮ ಕೈಗೊಂಡಿದೆ. ಇನ್ನೆರಡು ದಿನಗಳಲ್ಲಿ ಅವರೆಲ್ಲರೂ ನಮ್ಮ ಸಂಪರ್ಕಕ್ಕೆ ಬಂದು, ಅವರನ್ನು ಪರೀಕ್ಷೆಗೊಳಪಡಿಸುತ್ತೇವೆ. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಅವರು ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸುಧಾಕರ್ ಮನವಿ ಮಾಡಿದರು.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರುವ ವಿಚಾರ ಮುಗಿದ ಅಧ್ಯಾಯ. ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಅಂಕುಶ ಹಾಕಿದ್ದಾರೆ. ಹೊಸ ವರ್ಷಾಚರಣೆಯನ್ನು ಯಾವ ರೀತಿ ಬಿಗಿಯಾಗಿ ಮಾಡಬೇಕು ಎಂದು ಗೃಹ ಇಲಾಖೆಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸರಿಯಾದ ರೀತಿಯಲ್ಲಿ ನಮ್ಮ ಸಲಹೆಗಳನ್ನು ಅನುಷ್ಠಾನಕ್ಕೆ ತರುತ್ತಾರೆ ಎಂದು ಸುಧಾಕರ್ ಹೇಳಿದರು.