ಸೊಸೆ ವಿರುದ್ಧ ಅತ್ತೆ, ಅಣ್ಣನ ವಿರುದ್ಧ ತಮ್ಮನಿಗೆ ಜಯ: ಕೆಲವೆಡೆ ಲಾಟರಿ ಮೂಲಕ ಅಭ್ಯರ್ಥಿಗಳಿಗೆ ಗೆಲುವು

Update: 2020-12-30 13:56 GMT

ಬೆಂಗಳೂರು, ಡಿ. 30: ತೀವ್ರ ಪೈಪೋಟಿ ಸೃಷ್ಟಿಸಿದ್ದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ, ಅಣ್ಣನ ವಿರುದ್ಧ ತಮ್ಮ, ಪತ್ನಿ ಸೋತು-ಪತಿ ಗೆಲುವು, ಒಂದು, ಎರಡು ಮತಗಳ ಅಂತರದಿಂದ ಜಯಭೇರಿ, ಕೆಲವೆಡೆ ಇಬ್ಬರು ಅಭ್ಯರ್ಥಿಗಳಿಗೆ ಸಮವಾಗಿ ಮತಗಳು ಬಂದು ಫಲಿತಾಂಶ ಡ್ರಾ ಆಗಿದ್ದು, ಬಳಿಕ ಲಾಟರಿ ಮೂಲಕ ಗೆಲವು ಸಾಧಿಸಿದ್ದು ವಿಶೇಷವಾಗಿದೆ.

ಹಾಸನ ಜಿಲ್ಲೆಯ ಹೆರಗು ಗ್ರಾಮ ಪಂಚಾಯತ್ ಗೆ ಅತ್ತೆ ಸೊಂಬಮ್ಮ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಸೊಸೆ ಪವಿತ್ರಾ ಕೇವಲ ಮೂರು ಮತಗಳ ಅಂತರದಲ್ಲಿ ಸೋಲು ಕಂಡಿದ್ದು, ಸೊಸೆ ಪವಿತ್ರಾ 273 ಮತಗಳನ್ನು ಪಡೆದರೆ, ಅತ್ತೆ ಸೊಂಬಮ್ಮ 276 ಮತಗಳನ್ನು ಪಡೆದಿದ್ದು ಜಯದ ನಗೆ ಬೀರಿದ್ದಾರೆ.

ಬೂಕನಕೆರೆಯಲ್ಲಿ ಜೆಡಿಎಸ್ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪನವರ ಹುಟ್ಟೂರು ಮಂಡ್ಯ ಜಿಲ್ಲೆ ಬೂಕನಕೆರೆ ಗ್ರಾಮ ಪಂಚಾಯತ್ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮನಾಗಿ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಆ ಬಳಿಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಲಾಟರಿ ಮೂಲಕ ಜಯ ಗಳಿಸಿದ್ದಾರೆ. ಮಂಜುಳಾ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ಅವರಿಗೆ ಸಮನಾಗಿ 183 ಮತಗಳು ಬಂದಿದ್ದು, ಬಳಿಕ ಚುನಾವಣಾಧಿಕಾರಿಗಳು ಲಾಟರಿ ಎತ್ತುವ ಮೂಲಕ ಫಲಿತಾಂಶ ಪ್ರಕಟಿಸಿದ್ದು, ಅಂತಿಮವಾಗಿ ಮಂಜುಳಾ ವಿಜಯಮಾಲೆ ಧರಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯ ಪ್ರತಿ ವಾರ್ಡ್‍ನಲ್ಲಿ 500ರಿಂದ700 ಅಥವಾ 800 ಮಂದಿಯಷ್ಟು ಮತದಾರರಿದ್ದು, ಪ್ರತಿಯೊಂದು ಮತವೂ ಅತ್ಯಂತ ನಿಣಾರ್ಯಕವಾಗಿರುತ್ತದೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಕೇವಲ ಒಂದು ಮತದ ಅಂತರದಿಂದ ಹಲವು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಪತ್ನಿಯ ಸೋಲು-ಪತಿಯ ಜಯಭೇರಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಗುಂಡುಮುಣು ಗ್ರಾಮ ಪಂಚಾಯತ್ ನ ಕ್ಷೇತ್ರ ಸಂಖ್ಯೆ-1ರಲ್ಲಿ ಪತಿ ಗೆದ್ದು, ಪತ್ನಿ ಸೋಲು ಕಂಡಿದ್ದಾರೆ. ಎರಡು ಸ್ಥಾನಗಳಿದ್ದ ಈ ವಾರ್ಡ್ ನಲ್ಲಿ ಒಂದು ಸ್ಥಾನ ಸಾಮಾನ್ಯ ಹಾಗೂ ಒಂದು ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಪತಿ ಶ್ರೀಕಾಂತ 314 ಪಡೆದು ಗೆಲುವು ಕಂಡಿದ್ದು, ಮತ್ತೊಂದು ಕ್ಷೇತ್ರದಲ್ಲಿ ಅವರ ಪತ್ನಿ ಲಕ್ಷ್ಮೀದೇವಿ 283 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿಯ ವಿರುದ್ಧ ಸೋತಿದ್ದಾರೆ.

ತಾಯಿ-ಮಗ ಗೆಲುವು: ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಓತಕೇರಿ ಗ್ರಾ.ಪಂ.ನ ಗೋನಾಳ ಗ್ರಾಮದ ಹನುಮವ್ವ ಕುರಿ ಹಾಗೂ ಅವರ ಪುತ್ರ ದೊಡ್ಡಪ್ಪ ಕುರಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ರಾಜ್ಯದ ಒಟ್ಟು 5,728 ಗ್ರಾ.ಪಂ.ಗಳ ಒಟ್ಟು 91,339 ಸ್ಥಾನಗಳಿಗೆ ಡಿ.22 ಮತ್ತು ಡಿ.27ರಂದು ಎರಡು ಹಂತಗಳಲ್ಲಿ ನಡೆದಿದ್ದ ಗ್ರಾ.ಪಂ.ಚುನಾವಣಾ ಫಲಿತಾಂಶ ಹತ್ತು-ಹಲವು ವಿಶೇಷ, ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News