ಕೊಡಗಿನ 101 ಗ್ರಾ.ಪಂ.ಗಳ ಚುನಾವಣೆ ಫಲಿತಾಂಶ ಪ್ರಕಟ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳದ್ದೇ ಮೇಲುಗೈ
ಮಡಿಕೇರಿ, ಡಿ.30: ಕೊಡಗು ಜಿಲ್ಲಾ ವ್ಯಾಪ್ತಿಯ 101 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್ ನಿರೀಕ್ಷೆಯ ಮಟ್ಟ ಮುಟ್ಟಲಾಗದೆ ಮತ್ತೆ ನಿರಾಶೆ ಅನುಭವಿಸಿದೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೊಸ ವಿಶ್ವಾಸ ಮೂಡಿಸಿದ್ದಾರೆ.
ಜಿಲ್ಲೆಯ ಒಟ್ಟು 443 ಚುನಾವಣಾ ಕ್ಷೇತ್ರಗಳ 1202 ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ನಗರದ ಸಂತ ಜೋಸೆಫರ ಶಾಲೆಯಲ್ಲಿ, ಸೋಮವಾರಪೇಟೆ ತಾಲೂಕು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಿರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಬೆಳಗ್ಗಿನಿಂದಲೆ ಮತ ಎಣಿಕಾ ಕೇಂದ್ರಗಳತ್ತ ಆಯಾ ತಾಲೂಕಿನ ಗ್ರಾಮ ಪಂಚಾಯತ್ ಅಭ್ಯರ್ಥಿಗಳು, ಅವರ ಬೆಂಬಲಿಗರು ಮತ್ತು ಚುನಾವಣಾ ಆಸಕ್ತರು ಬಂದು ಸೇರುವ ಮೂಲಕ ಜನಜಂಗುಳಿ ನಿರ್ಮಾಣವಾಗಿತ್ತು. ಪಂಚಾಯತ್ಗಳ ಫಲಿತಾಂಶ ಬರುತ್ತಿದ್ದಂತೆ ಗೆಲುವಿನ ಅಭ್ಯರ್ಥಿಯನ್ನು ಸ್ವಾಗತಿಸುವ, ಹಾರ ತುರಾಯಿಗಳನ್ನು ಹಾಕಿ ಸಂಭ್ರಮಿಸುವ ಕಾರ್ಯ ನಡೆಯಿತಾದರು, ವಿಜಯೋತ್ಸವಕ್ಕೆ ಅವಕಾಶವಿಲ್ಲದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಅಕ್ಕನ ವಿರುದ್ಧ ತಂಗಿಗೆ ಗೆಲುವು
ಮೇಕೇರಿ ಗ್ರಾಮ ಪಂಚಾಯತ್ಗೆ ಒಳಪಟ್ಟ ಬಿಳಿಗೇರಿ ವಾರ್ಡ್‍ನಿಂದ ಸ್ಪರ್ಧಿಸಿದ್ದ ಬಿ.ಎನ್.ಪುಷ್ಪಾ ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ಅಕ್ಕ ಸುಮಾವತಿ ವಿರುದ್ಧ 97 ಮತಗಳ ಅಂತರದಿಂದ ಗೆಲುವು ಸಾಧಿಸಿ ಗಮನ ಸೆಳೆದರು.
ಜಿ.ಪಂ, ತಾ.ಪಂ ನಲ್ಲಿದ್ದವರೂ ಗೆದ್ದರು
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕೆಲವರು ಆಶ್ವರ್ಯಕರವೆಂಬಂತೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಪ್ರಮುಖವಾಗಿ ವಿರಾಜಪೇಟೆ ತಾಲೂಕು ಪಂಚಾಯತ್ ಸದಸ್ಯರಾಗಿ ಹಿಂದೆ ಕಾರ್ಯ ನಿರ್ವಹಿಸಿದ್ದ, ಜಿಲ್ಲಾ ಕಾಂಗ್ರೆಸ್ ವಕ್ತಾರರೂ ಆಗಿರುವ ಆಪಟ್ಟೀರ ಟಾಟು ಮೊಣ್ಣಪ್ಪ ಅವರು ಮಾಯಮುಡಿ ಗ್ರಾಪಂನಿಂದ 569 ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಭಾಗಮಂಡಲ ಪಂಚಾಯತ್ ಜೆಡಿಎಸ್‍ಗೆ
ಮಡಿಕೇರಿ ತಾಲೂಕಿನ, ಭಾಗಮಂಡಲ ಪಂಚಾಯತ್ಯಲ್ಲಿ ಸ್ಪರ್ಧಿಸಿದ್ದ ಹೊಸೂರು ಸತೀಶ್ ಜೋಯಪ್ಪ ಅವರು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದವರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಇವರು ಸೇರಿದಂತೆ 7 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಭಾಗಮಂಡಲ ಪಂಚಾಯತ್ ಬಹುತೇಕ ಜೆಡಿಎಸ್ ತೆಕ್ಕೆಗೆ ಬಂದಂತಾಗಿದೆ.
ಸೋಮವಾರಪೇಟೆ ತಾ.ಪಂ ಸದಸ್ಯರಾದ ಚೆಟ್ಟಳ್ಳಿಯ ಬಲ್ಲಾರಂಡ ಮಣಿಉತ್ತಪ್ಪ ಅವರ ಪುತ್ರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರು ಚೆಟ್ಟಳ್ಳಿ ಗ್ರಾಪಂನಲ್ಲಿ ಸ್ಪರ್ಧಿಸಿ 295 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಇದೇ ಪಂಚಾಯತ್ಯಲ್ಲಿ ಪೊನ್ನತ್ತಮೊಟ್ಟೆ ವಿಭಾಗದಿಂದ ಮಧುಸೂದನ್ ಅವರು ಸತತ ನಾಲ್ಕನೇ ಬಾರಿಗೆ ಪಂಚಾಯತ್ಯನ್ನು ಪ್ರವೇಶಿಸಿದ ಸಾಧನೆ ಮಾಡಿದ್ದಾರೆ.
ಒಂದು ಮತದ ಗೆಲುವು
ತಿತಿಮತಿ ಗ್ರಾಮ ಪಂಚಾಯತ್ಯ ನೊಕ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಜನಿ ಮತ್ತು ಸರಸ್ವತಿ ಸಮಾನ ಮತಗಳನ್ನು ಪಡೆದಿದ್ದರು. ಮರುಮತ ಎಣಿಕೆ ಸಂದರ್ಭ ರಜನಿ ಅವರು 1 ಮತದ ಅಂತರದಿಂದ ಗೆಲುವು ಸಾಧಿಸಿದ್ದು ವಿಶೇಷ.
ಪತಿ, ಪತ್ನಿ ಗೆಲುವು
ಹಾಕತ್ತೂರು ಪಂಚಾಯತ್ ವ್ಯಾಪ್ತಿಯ ಬಿಳಿಗೇರಿ ವಾರ್ಡ್ 2ರಿಂದ ಸ್ಪರ್ಧಿಸಿದ್ದ ಪತಿ-ಪತ್ನಿ ಗೆಲುವು ದಾಖಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ಖಾದರ್, ಬಿಜೆಪಿ ಬೆಂಬಲಿತ ದರ್ಶನ ಅವರನ್ನು ಪರಾಭವಗೊಳಿಸಿದ್ದಾರೆ. ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಕಿರ 220 ಮತ ಪಡೆದು, ಎದುರಾಳಿ ಜಯಂತಿ ಅವರನ್ನು ಸೋಲಿಸಿದ್ದಾರೆ. ಪತಿ ಅಬ್ದುಲ್ ಖಾದರ್ 2ನೇ ಬಾರಿ ಗೆಲುವು ಪಡೆದರೆ, ಪತ್ನಿ ಸಾಕೀರ ಮೊದಲ ಬಾರಿ ಜಯಶಾಲಿಯಾಗಿದ್ದಾರೆ.
ಲಾಟರಿಯಲ್ಲಿ ಒಲಿದ ಅದೃಷ್ಟ
ಚೌಡ್ಲು ಗ್ರಾಮಪಂಚಾಯತ್ ನ ವಾರ್ಡ್ ನಂ.1 ಆಲೆಕಟ್ಟೆ ರಸ್ತೆಯ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸತ್ಯ ಹಾಗೂ ಲೋಲಾಕ್ಷಿ ತಲಾ 210 ಮತಗಳನ್ನು ಪಡೆದು ಸಮಬಲ ಸಾಧಿಸಿದರು.
ಚುನಾವಣಾಧಿಕಾರಿ ತಹಶೀಲ್ದಾರ್ ಗೋವಿಂದರಾಜು ಸೂಚನೆಯಂತೆ ಲಾಟರಿ ಹಾಕಿದ ಸಂದರ್ಭ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತ್ಯ ವಿಜೇತರಾಗಿದ್ದಾರೆ.
ಅವಿರೋಧ ಆಯ್ಕೆ
ಮಡಿಕೇರಿ ತಾಲೂಕಿನ (26) ಮತ್ತು ಸೋಮವಾರಪೇಟೆ ತಾಲೂಕಿನ (40) ಒಟ್ಟು 66 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆದಿದ್ದು, ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ.ನ 2 ನೇ ಮೊಣ್ಣಂಗೇರಿ, ಕೆ.ನಿಡುಗಣೆ ಗ್ರಾ.ಪಂ.ಯ ಹೆಬ್ಬೆಟ್ಟಗೇರಿ ಮತ್ತು ನಾಪೋಕ್ಲು ಗ್ರಾ.ಪಂ.ಕೊಳಕೇರಿ ಸೇರಿದಂತೆ ಒಟ್ಟು 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾ.ಪಂ.ಯ ಗೋಣಿಮರೂರು, ಕೊಡಗರಹಳ್ಳಿ ಗ್ರಾ.ಪಂ.ಯ ಅಂದಗೋವೆ ಮತ್ತು ಗರ್ವಾಲೆ ಗ್ರಾ.ಪಂ.ಯ ಶಿರಂಗಳ್ಳಿ ಕ್ಷೇತ್ರ ಸೇರಿ ಒಟ್ಟು 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 24 ಮಂದಿ, ಸೋಮವಾರಪೇಟೆ ತಾಲೂಕಿನಲ್ಲಿ 19 ಮಂದಿ ಒಟ್ಟು 43 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಲು ಮುರಿದುಕೊಂಡ ಅಭ್ಯರ್ಥಿ
ಮತ ಎಣಿಕೆ ಕೇಂದ್ರ ನೂಕು ನುಗ್ಗಲಿನಿಂದಾಗಿ ಹೆಬ್ಬಾಲೆ ಕ್ಷೇತ್ರದ ಅಭ್ಯರ್ಥಿ ಕಾಲು ಮುರಿದುಕೊಂಡ ಘಟನೆ ಕುಶಾಲನಗರದ ಮತ ಎಣಿಕೆ ಕೇಂದ್ರದಲ್ಲಿ ನಡೆದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಸೂತ್ರವಾಗಿ ನಡೆದ ಮತ ಎಣಿಕೆ
ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ನಗರದ ಸಂತ ಜೋಸೆಫರ ಶಾಲೆಯಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಭದ್ರತಾ ಕೊಠಡಿಯನ್ನು 8 ಗಂಟೆಗೆ ಸರಿಯಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಚುನಾವಣಾ ವೀಕ್ಷಕರಾದ ಎ.ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರ ಸಮ್ಮುಖದಲ್ಲಿ ತೆರೆಯಲಾಯಿತು. ಮಡಿಕೇರಿ ತಾಲೂಕು ನೋಡಲ್ ಅಧಿಕಾರಿ ನಿಲೇಶ್ ಸಿಂದೆ, ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ದಿನೇಶ್ ಕುಮಾರ್ ಇತರರು ಹಾಜರಿದ್ದರು.
ಮಡಿಕೇರಿ ತಾಲೂಕಿನ 108 ಕ್ಷೇತ್ರಗಳ 267 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 676 ಮಂದಿ ಕಣದಲ್ಲಿದ್ದರು. ಸೋಮವಾರಪೇಟೆ ತಾಲೂಕಿನ 177 ಕ್ಷೇತ್ರಗಳ 462 ಸ್ಥಾನಗಳಿಗೆ 1488 ಮಂದಿ, ವಿರಾಜಪೇಟೆ ತಾಲೂಕಿನ 136 ಕ್ಷೇತ್ರಗಳ 366 ಸ್ಥಾನಗಳಿಗೆ 924 ಮಂದಿ ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 421 ಕ್ಷೇತ್ರಗಳ 1095 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 3088 ಮಂದಿ ಕಣದಲ್ಲಿದ್ದರು.