ಕೋಲಾರದ ಗುಹೆಗಳಲ್ಲಿನ ಎಲೆಮೂಗಿನ ಬಾವಲಿಗಳ ಸಂರಕ್ಷಣೆಗೆ ಯೋಜನೆ
ಬೆಂಗಳೂರು, ಡಿ.30 : ಹಲವಾರು ವರ್ಷಗಳ ಹಿಂದಿನವರೆಗೂ ಕೋಲಾರಕ್ಕೇ ವಿಶಿಷ್ಟವಾದ,ಮೂಗಿನ ಮೇಲೆ ಎಲೆಯಂತಹ ಪೊರೆಯನ್ನು ಹೊಂದಿರುವ ‘ಎಲೆಮೂಗಿನ ಬಾವಲಿಗಳು’ ಕೋಲಾರ ಜಿಲ್ಲೆಯ ಹನುಮನಹಳ್ಳಿಯ ಎರಡು ಗುಹೆಗಳಲ್ಲಿ ಮಾತ್ರ ಕಂಡುಬರುತ್ತಿದ್ದವು. ಆದರೆ ಈಗ ಒಂದು ಗುಹೆಯಲ್ಲಿಯ ಬಾವಲಿಗಳು ಮಾತ್ರ ಉಳಿದುಕೊಂಡಿದ್ದು,ಇನ್ನೊಂದರಲ್ಲಿದ್ದ ಬಾವಲಿಗಳು ಸಂಪೂರ್ಣವಾಗಿ ನಿರ್ನಾಮಗೊಂಡಿವೆ. ಈ ವಿಶಿಷ್ಟ ಬಾವಲಿಗಳ ಅವನತಿಗೆ ಕಾರಣಗಳು ಇನ್ನೂ ಗೊತ್ತಾಗಿಲ್ಲ. ಇದೀಗ ಕರ್ನಾಟಕ ಅರಣ್ಯ ಇಲಾಖೆಯು ಭಾರತೀಯ ಬಾವಲಿ ಸಂರಕ್ಷಣಾ ಟ್ರಸ್ಟ್ (ಬಿಸಿಐಟಿ)ನ ಸಹಭಾಗಿತ್ವದಲ್ಲಿ ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವ,ಉಳಿದಿರುವ ಎಲೆಮೂಗಿನ ಬಾವಲಿಗಳನ್ನು ಅವನತಿಯಿಂದ ರಕ್ಷಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ.
ಬಾವಲಿಗಳ ಸಂರಕ್ಷಣೆಗಾಗಿ ಯೋಜನೆಯೊಂದನ್ನು ರೂಪಿಸುವ ಹೊಣೆಯನ್ನು ಬಿಸಿಐಟಿಗೆ ವಹಿಸಲಾಗಿದೆ,ಇದರ ಜೊತೆಗೆ ಈ ಜಾತಿಯ ಬಾವಲಿಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ಅನುದಾನವನ್ನೂ ಅದಕ್ಕೆ ಸರಕಾರವು ಮಂಜೂರು ಮಾಡಿದೆ. ಯೋಜನೆಯನ್ನು ಕೈಗೆತ್ತಿಕೊಳ್ಳಲು ಹ್ಯಾಬಿಟಾಸ್ ಟ್ರಸ್ಟ್‌ನಿಂದ ಆರ್ಥಿಕ ನೆರವೂ ಬಿಸಿಐಟಿಗೆ ಲಭಿಸಿದೆ.
2014ರಲ್ಲಿ ಉಸ್ಮಾನಿಯಾ ವಿವಿಯು ಸಂಶೋಧನೆಯೊಂದನ್ನು ನಡೆಸಿದ ಬಳಿಕವಷ್ಟೇ ಒಂದು ಗುಹೆಯಲ್ಲಿನ ಬಾವಲಿಗಳ ಸಂತತಿ ನಶಿಸುತ್ತಿದೆ ಎಂಬ ಕಳವಳಕಾರಿ ವಿಷಯ ಸರಕಾರಕ್ಕೆ ಮೊದಲ ಬಾರಿಗೆ ಗೊತ್ತಾಗಿತ್ತು. ಸರಕಾರವು ತಕ್ಷಣ ಗುಹೆಗಳ ಸುತ್ತಲಿನ 30 ಎಕರೆ ಭೂಮಿಯನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸಿತ್ತು ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನ ರಾಜ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕೋಲಾರ ಎಲೆಮೂಗಿನ ಬಾವಲಿಗಳು ಕರ್ನಾಟಕದ ವಿಶಿಷ್ಟ ಪ್ರಭೇದವಾಗಿದ್ದು,ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಹುಲಿಯಂತಹ ದೊಡ್ಡ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ,ಆದರೆ ಕರ್ನಾಟಕದಲ್ಲಿ ನಾವು ನಿರಂತರವಾಗಿ ಸಣ್ಣ,ಹೆಚ್ಚು ಗೊತ್ತಿರದ ಜಾತಿಗಳ ಪ್ರಾಣಿಗಳನ್ನು ಸಂರಕ್ಷಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದ ರಾಜ್,ಕೋಲಾರದ ಗುಹೆಗಳ ಸುತ್ತಲಿನ ಪ್ರದೇಶವು ಅಧಿಸೂಚಿತವಾಗಿದ್ದು,ನೂತನ ಮೂಲಸೌಕರ್ಯ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.