‘ಸೋತರೆ ಮಾಡುವ ಕೆಲಸಗಳು’ ಕರಪತ್ರದಿಂದ ಸುದ್ದಿಯಾಗಿದ್ದ ಮಹಿಳೆ ಗಳಿಸಿದ್ದು ಎಷ್ಟು ಮತಗಳನ್ನು ಗೊತ್ತಾ?
ತುಮಕೂರು, ಡಿ.30: ತಾನು ಚುನಾವಣೆಯಲ್ಲಿ ಗೆದ್ದರೆ ಏನು ಮಾಡುತ್ತೇನೆ ಎನ್ನುವುದಕ್ಕಿಂತ ಸೋತರೆ ಏನೇನು ಸಮಾಜ ಸೇವೆ ಮಾಡುತ್ತೇನೆ ಎಂದು ಮುದ್ರಿಸಿ, ಗಮನ ಸೆಳೆದಿದ್ದ ಹೆಬ್ಬೂರು ಗ್ರಾಮ ಪಂಚಾಯತ್ ನ ಕಲ್ಕರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಮ್ಮ ಕೇವಲ ಎರಡು ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ.
ತಾನು ಗೆದ್ದರೆ ದೇವಾಲಯಗಳಿಗೆ ಹೋಗಲು ರಸ್ತೆ, ಊರಿಗೆ ಚರಂಡಿ ಸೇರಿದಂತೆ ಒಳ್ಳೆಯ ಕೆಲಸ ಮಾಡಿದರೆ, ಸೋತರೆ ಆನರ್ಹ ಪಡಿತರದಾರರ ವಜಾ, ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮನಸ್ವಿನಿ ಯೋಜನೆ ಲಾಭ ಪಡೆಯುತ್ತಿರುವ ಕುಟುಂಬಗಳ ಅರ್ಜಿ ವಜಾ, ಊರಿಗೆ ಸ್ಮಶಾನ, ಸರಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ ಹಲವು ಭರವಸೆಗಳನ್ನು ತಮ್ಮ ಕರಪತ್ರದಲ್ಲಿ ನೀಡಿದ್ದರು.
ಗಂಗಮ್ಮ ಅವರ ಈ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಇವರು ಗೆಲ್ಲುವುದಕ್ಕಿಂತ ಸೋಲುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದರು. ಇದು ಮತದಾರರನ್ನು ಬೆದರಿಸುವ ತಂತ್ರ ಎಂದು ಕೋಲಾರದ ವಕೀಲರೊಬ್ಬರು ಈ ಕರಪತ್ರದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಗಂಗಮ್ಮ ಕೇವಲ 2 ಮತಗಳನ್ನು ಪಡೆದು ಹೀನಾಯ ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ 845 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎಂ ತಿಮ್ಮೇಗೌಡ 453 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಗಂಗಮ್ಮ ಅವರು ಕರಪತ್ರದಲ್ಲಿ ಮುದ್ರಿಸಿದಂತೆ ಗೆದ್ದರೆ ಮಾಡುವ ಒಳ್ಳೆಯ ಕೆಲಸಗಳಿಂತ, ಸೋತರೆ ಮಾಡುವ ಕೆಲಸಗಳಿಗೆ ಹೆಚ್ಚು ಜನಪ್ರಿಯವಾಗಿದ್ದವು. ಗಂಗಮ್ಮ ಸೋಲು ಕಂಡಿದ್ದು, ಅವರು ಕರಪತ್ರದಲ್ಲಿ ಮುದ್ರಿಸಿದಂತೆ ನಡೆದುಕೊಳ್ಳುವರೇ ಎಂದು ಕಾದು ನೋಡಬೇಕಾಗಿದೆ.