ರಾಜ್ಯದ ಬಹುತೇಕ ಗ್ರಾಪಂ ಸ್ಥಾನಗಳ ಚುನಾವಣೆ ಫಲಿತಾಂಶ ಪ್ರಕಟ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುಂಚೂಣಿಯಲ್ಲಿ

Update: 2020-12-30 16:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 30: ರಾಜ್ಯದ 5,728 ಗ್ರಾಮ ಪಂಚಾಯತ್ ಗಳ ಒಟ್ಟು 91,339 ಸ್ಥಾನಗಳಿಗೆ ಡಿ.22 ಮತ್ತು ಡಿ.27ರಂದು ಎರಡು ಹಂತಗಳಲ್ಲಿ ನಡೆದ ಚುನಾವಣಾ ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ಗ್ರಾ.ಪಂ.ಗಳ ಫಲಿತಾಂಶ ಹೊರಬಿದ್ದಿದೆ. ಒಟ್ಟು 54,041 ಸ್ಥಾನಗಳ ಫಲಿತಾಂಶ ಪ್ರಕಟಿಸಲಾಗಿದೆ.

ಉಳಿದ 36,781 ಸ್ಥಾನಗಳಿಗೆ ಫಲಿತಾಂಶ ಘೋಷಣೆ ಬಾಕಿ ಇದ್ದು, ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮುಂಜಾನೆ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಆಡಳಿತಾರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುಂಚೂಣಿಯಲ್ಲಿದ್ದು, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಪಕ್ಷೇತರರು ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ.

ತೀವ್ರ ರಾಜಕೀಯ ಪೈಪೋಟಿ, ಕುತೂಹಲ ಸೃಷ್ಟಿಸಿದ್ದ ಈ ಗ್ರಾ.ಪಂ. ಚುನಾವಣೆಯಲ್ಲಿ ರಾಜ್ಯಾದ್ಯಂತ ಒಟ್ಟು 8,074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಒಟ್ಟು 82,616 ಸ್ಥಾನಗಳಿಗೆ ಒಟ್ಟಾರೆ 2,22,814 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟಾರೆ ಎರಡೂ ಹಂತದಲ್ಲಿ ಸುಮಾರು ಶೇ.80ಕ್ಕೂ ಹೆಚ್ಚು ಮತದಾನವಾಗಿತ್ತು.

ರಾಜ್ಯದಲ್ಲಿ ಪುರುಷ, ಮಹಿಳೆ ಹಾಗೂ ಇತರೆ ಮತದಾರರು ಸೇರಿದಂತೆ ಒಟ್ಟು 2,94,50.248 ಮಂದಿ ಗ್ರಾಮೀಣ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಬೆಳಗ್ಗೆ 8 ಗಂಟೆಯಿಂದಲೇ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಭಾರೀ ಬಿಗಿ ಭದ್ರತೆಗೆ ನಡುವೆ ಮತ ಎಣಿಕೆ ಕಾರ್ಯ ನಡೆದಿತ್ತು.

ಗ್ರಾಮ ಪಂಚಾಯತ್ ಚುನಾವಣೆಗಳು ರಾಜಕೀಯವಾಗಿ ಪಕ್ಷರಹಿತ ಚುನಾವಣೆಗಳಾಗಿದ್ದು, ಯಾವುದೇ ಪಕ್ಷದ ಚಿಹ್ನೆಗಳಡಿಯಲ್ಲಿ ನಡೆಯುವುದಿಲ್ಲ. ರಾಜಕೀಯ ಪಕ್ಷಗಳ ಬೆಂಬಲಿತರಷ್ಟೇ ಆಯ್ಕೆಯಾಗಿರುವುದು ಅಂಕಿ-ಅಂಶಗಳಿಂದ ಗೊತ್ತಾಗಿದೆ. ಮತ ಎಣಿಕೆ ಪ್ರಕ್ರಿಯೆ ಮಧ್ಯರಾತ್ರಿವರೆಗೂ ಸಾಗಿದ್ದು ನಾಳೆ ಬೆಳಗ್ಗೆ ವೇಳೆಗೆ ನಿಚ್ಚಳ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.

ಸೊಸೆ ಸೋಲಿಸಿದ ಅತ್ತೆ, ಪತ್ನಿ ಸೋತು-ಪತಿ ಗೆಲುವು, ಸೋತ ಅಭ್ಯರ್ಥಿ ಮರು ಮತಎಣಿಕೆಯಲ್ಲಿ ಜಯಭೇರಿ ಬಾರಿಸಿರುವುದು, ಇಬ್ಬರು ಅಭ್ಯರ್ಥಿಗಳಿಗೂ ಸಮನಾಗಿ ಮತ ಬಂದು ಡ್ರಾ ಆಗಿದ್ದು, ಲಾಟರಿ ಮೂಲಕ ಗೆಲುವು ದಾಖಲಿಸಿದ್ದು, ಒಂದೇ ಮತದ ಅಂತರದಿಂದ ಗೆಲುವು ಸಾಧಿಸಿದ ಹಲವು ಉದಾಹರಣೆಗಳಿಗೆ ಈ ಚುನಾವಣೆ ಸಾಕ್ಷಿಯಾಗಿದೆ. ಬಾಣಂತಿ, ಜೈಲಿನಲ್ಲಿದ್ದು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ, ಮಂಗಳಮುಖಿ ಸೇರಿದಂತೆ ಹಲವು ಮಂದಿ ಗೆಲುವು ಸಾಧಿಸಿದ್ದಾರೆ.

'ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಬಿಜೆಪಿ ನಗರ ಪ್ರದೇಶದ ವಿದ್ಯಾವಂತರಿಗೆ ಮಾತ್ರ ಸೀಮಿತವೆಂದು ಟೀಕಿಸುತ್ತಿದ್ದವರಿಗೆ ದಿಟ್ಟ ಉತ್ತರವಾಗಿದೆ. ಬಿಜೆಪಿ ಈಗ ರೈತರು ಹಾಗೂ ಗ್ರಾಮೀಣ ಭಾಗದ ಜನರ ಮೊದಲ ಆಯ್ಕೆಯ ಪಕ್ಷವಾಗಿ ಹೊರ ಹೊಮ್ಮಿದೆ'

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

'ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಪಡೆದಿದ್ದು, ಪಕ್ಷದ ಗ್ರಾಮ ಸ್ವರಾಜ್ಯ ಸಮಾವೇಶ, ಪಂಚರತ್ನ ಸಮಿತಿ ರಚನೆ, ಬೂತ್ ಸಮಿತಿ ರಚನೆ ಮಾಡಲಾಗಿತ್ತು. ಅಭಿವೃದ್ಧಿಗಾಗಿ ಗ್ರಾಮೀಣ ಜನತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡಿ ಬೆಂಬಲಿಸಿದ್ದಾರೆ'

-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News