×
Ad

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಗೆ ಪಿಐಎಲ್

Update: 2020-12-30 21:58 IST

ಬೆಂಗಳೂರು, ಡಿ.30: ಕೇಂದ್ರ ಸರಕಾರದ ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ.

ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ನಗರದ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಆರ್.ದೇವದಾಸ್ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕೆಲ ಕಾಲ ವಕೀಲರ ವಾದ ಆಲಿಸಿದ ಪೀಠ ವಿಚಾರಣೆಯನ್ನು ಜನವರಿಗೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ನಿರ್ಭಯ ಪ್ರಕರಣದ ಬಳಿಕ ಕೇಂದ್ರ ಸರಕಾರದ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ 2019ರ ಮಾ.2ರಂದು 667 ಕೋಟಿ ವೆಚ್ಚದಲ್ಲಿ ಬೆಂಗಳೂರು ಸೇಫ್ ಸಿಟಿ ಯೋಜನೆ ಪ್ರಕಟಿಸಿದೆ. ಯೋಜನೆ ಜಾರಿಗೆ ಕೂಡಲೇ 167 ಕೋಟಿ ನೀಡಲಾಗಿದೆ. ಆದರೆ, ಯೋಜನೆ ಜಾರಿಗಾಗಿ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದಿವೆ. ಹೀಗಾಗಿಯೇ 2019ರ ನ.7ರಂದು ಕರೆದಿದ್ದ ಟೆಂಡರನ್ನು ಮರುದಿನವೇ ಹಿಂಪಡೆಯಲಾಗಿದೆ.

ಈ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿವೆ. ಇದರ ನಡುವೆಯೂ ಹೊಸ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತಿದೆ. ಸದ್ಯ ಯೋಜನೆ ಅಂದಾಜು ವೆಚ್ಚ 1067 ಕೋಟಿ ತಲುಪಲಿದೆ. ಹೀಗಾಗಿ, ಟೆಂಡರ್ ಪ್ರಕ್ರಿಯೆ ವೇಳೆ ಆಗಿರುವ ಅವ್ಯವಹಾರ ಆರೋಪಗಳನ್ನು ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು. ಪ್ರಕರಣದ ತನಿಖೆ ನಡೆಸುವವರೆಗೆ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸದಂತೆ ಸರಕಾರ ಮತ್ತು ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News