×
Ad

ಮೈಸೂರು: ರಾತ್ರಿಯಾದರೂ ಮುಂದುವರಿದ ಗ್ರಾ.ಪಂ. ಚುನಾವಣೆ ಮತ ಎಣಿಕೆ

Update: 2020-12-30 23:19 IST

ಮೈಸೂರು,ಡಿ.30: ಗ್ರಾ.ಪಂ. ಚುನಾವಣಾ ಮತಗಳ ಎಣಿಕೆ ಮೈಸೂರು ಜಿಲ್ಲೆಯಲ್ಲಿ ಇನ್ನೂ ಮುಂದುವರಿದಿದ್ದು, ಅಂತಿಮ ಹಂತ ಫಲಿತಾಂಶ ಮಧ್ಯರಾತ್ರಿ ವೇಳೆಗೆ ಲಭಿಸಲಿದೆ.

ಮೈಸೂರು ಜಿಲ್ಲೆಯ ಮೈಸೂರು, ನಂಜನಗೂಡು, ಟಿ.ನರಸೀಪುರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಮತ್ತು ಸರಗೂರು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಅಭ್ಯರ್ಥಿಗಳನ್ನು ಅವರ ಬೆಂಬಲಿಗರು ಎತ್ತಿಕೊಂಡು ಜಯಘೋಷ ಮೊಳಗಿಸಿದರು.

ಮೈಸೂರು ತಾಲೂಕಿನ ಮತ ಎಣಿಕೆ ಕಾರ್ಯ ಪಡುವಾರಹಳ್ಳಿಯ ಮಹರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ಬುಧವಾರ ಬೆ.8 ಗಂಟೆಗೆ ಆರಂಭವಾಯಿತು. ಮೊದಲ ಹಂತದಲ್ಲಿ ಮೈಸೂರು ತಾಲೂಕಿನ ಗುಂಗ್ರಾಲ್ ಚತ್ರದ ಮತ ಎಣಿಕೆ ನಡೆದರೆ ಎರಡನೇ ಹಂತದಲ್ಲಿ ಜಯಪುರ ಗ್ರಾ.ಪಂ. ಮತಗಳ ಎಣಿಕೆ ನಡೆಯಿತು.

ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಕಾಲೇಜಿನ ಹೊರಭಾಗದಲ್ಲಿ ಜಯಘೋಷ ಮೊಳಗಿಸಿದರು.

ಜಿಲ್ಲೆಯ ಕೆ.ಆರ್.ನಗರದ ಸಾಲಿಗ್ರಾಮದ 7ನೇ ಬ್ಲಾಕ್‍ನಲ್ಲಿ ಸ್ಪರ್ಧೆ ಮಾಡಿದ್ದ ತೃತೀಯ ಲಿಂಗಿ ದೇವಿಕ ಗೆಲುವು ಸಾಧಿಸಿದ್ದಾರೆ. ನಂಜನಗೂಡು ತಾಲೂಕು ಕೆಬ್ಬೇಪುರ ಗ್ರಾಮದಲ್ಲಿ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ನಂಜುಂಡಸ್ವಾಮಿ ಜಯಗಳಿಸಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು.

ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಸೊಸೆಗೆ ಭರ್ಜರಿ ಗೆಲುವು

ಜಿಲ್ಲೆಯ ನಂಜನಗೂಡು ತಾಲೂಕಿನ ನೇರಳೆ ಗ್ರಾಮದ 3ನೇ ಬ್ಲಾಕ್‍ನಿಂದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ದಿ.ಎನ್.ಎಸ್.ವೀರಭದ್ರಯ್ಯ ಅವರ ಸೊಸೆ ರೇಷ್ಮಾ ಹರೀಶ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. 

ನೇರಳೆ ಗ್ರಾ.ಪಂ.ನ 3ನೇ ಬ್ಲಾಕ್ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಎಂಎಸ್ಸಿ ಸ್ನಾತಕೋತ್ತರ ಪಧವೀದರೆ ರೇಷ್ಮಾ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದರು. 316 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೇಮಾ ಮಹೇಶ್ (75) ಮತಗಳು ವಿರುದ್ಧ ಜಯಗಳಿಸಿದ್ದಾರೆ.
ಈ ಬ್ಲಾಕ್‍ನಲ್ಲಿ ಒಟ್ಟು 618 ಮತಗಳಿದ್ದು, 516 ಮತಗಳು ಚಲಾವಣೆಗೊಂಡಿದ್ದವು. ರೇಷ್ಮಾ ಅವರಿಗೆ ಇಬ್ಬರು ಮಕ್ಕಳಿದ್ದು, ಪತಿ ಹರೀಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವು: ಸಚಿವ ಎಸ್.ಟಿ.ಸೋಮಶೇಖರ್
ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆಯ ಇತಿಹಾಸದಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜಯಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮೊದಲಿಗೆ ಗೆಲುವು ಸಾಧಿಸಿದ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ, ಬಿಜೆಪಿ ಗ್ರಾಮೀಣ ಘಟಕದ ತಂಡ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಮಂಡಲ ಅಧ್ಯಕ್ಷರು, ಸಂಸದರು, ಶಾಸಕರು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರಾಜಿತ ಅಭ್ಯರ್ಥಿಗಳು ಹಾಗೂ ಪ್ರಮುಖವಾಗಿ ಮತದಾರ ಪ್ರಭುವಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. 

ಮೈಸೂರು ಜಿಲ್ಲೆಯಲ್ಲಿ 250 ಗ್ರಾಮ ಪಂಚಾಯತ್ ಗಳಿದ್ದು, ಒಟ್ಟು 4232 ಗ್ರಾಮ ಪಂಚಾಯತ್ ಸ್ಥಾನಗಳಿವೆ. ಇದರಲ್ಲಿ 20 ಸ್ಥಾನಗಳು ನಾಮಪತ್ರ ಸಲ್ಲಿಸದೇ ಖಾಲಿ ಇದ್ದು, 205 ಸದಸ್ಯರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಒಟ್ಟಾರೆಯಾಗಿ 4007 ಸ್ಥಾನಗಳ ಪೈಕಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡು ಪಕ್ಷಕ್ಕೆ ಬಲತುಂಬಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News