ಶೀಘ್ರದಲ್ಲೇ ಕೋಲಾರದಲ್ಲಿ ಸಂವಿಧಾನ ರಕ್ಷಣಾ ಸಮಾವೇಶ : ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ

Update: 2020-12-31 10:23 GMT

ಕೋಲಾರ : ಸಂವಿಧಾನದ ರಕ್ಷಣೆಗಾಗಿ ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ಕಾನೂನುಗಳ ವಿರುದ್ಧ ಕೋಲಾರ ಲೋಕಸಭಾ ಕ್ಷೇತ್ರದ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.

ಇಲ್ಲಿನ ಹೊನ್ನೇನಹಳ್ಳಿ ಯಲ್ಲಿರುವ ಮಹಾನ್ ನಾರಾಯಣಸ್ವಾಮಿ ಗಾರ್ಡನ್ ಹೋಂ ನಲ್ಲಿ ಏರ್ಪಡಿಸಿದ್ದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿ ಸಂವಿಧಾನಕ್ಕೆ ಬದ್ದ ಎನ್ನುತ್ತಾರೆ,  ಪಾರ್ಲಿಮೆಂಟ್ ನಲ್ಲಿ ಸಂವಿಧಾನದ ಮೇಲೆ ಪ್ರಮಾಣ ಮಾಡ್ತಾರೆ, ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಾ, ಸಂವಿಧಾನವನ್ನು ತಿರುಚಿ ಬರೆಯಲು ಹೊರಟಿದ್ದಾರೆ. ಕೇಳಿದರೆ, ಅವರದ್ದೇ ಪಕ್ಷದವರು ಸಂವಿಧಾನ ಬದಲಾವಣೆ ಮಾಡಲೆಂದೇ ಅಧಿಕಾರಕ್ಕೆ ಬಂದಿರುವುದಾಗಿ ಹೇಳಿಕೆ ನೀಡುತ್ತಾರೆ ಎಂದು ಆರೋಪಿಸಿದರು.

ಆದರೆ, ಭಾರತ ಸಂವಿಧಾನ ಜಗತ್ತೇ ಒಪ್ಪಿಕೊಂಡ ಸಂವಿಧಾನ . ಅದು ಭಾರತದ ಒಂದು ಪವಿತ್ರ ಗ್ರಂಥವೂ ಹೌದು ಎಂದು ಬಣ್ಣಿಸಿದರು. ಸಂವಿಧಾನವನ್ನು ಬದಲಾವಣೆ ಮಾಡ್ತೀವಿ ಅಂತಾರೆ, ಸಂವಿಧಾನದ ಮೇಲೆ ಪ್ರಮಾಣ ಮಾಡ್ತಾರೆ, ಇವರ ಜೊತೆಯಲಿ  ನಮ್ಮ ಮಕ್ಕಳು ಸೇರಿದರೆ ಏನು ಮಾಡುವುದು ಎಂದು ಆತಂಕ ಪಟ್ಟರು.

ಗಾಂಧೀಜಿ ಅಂತರಾಷ್ಟ್ರೀಯ ಮಹಾ ಮಾನವತಾವಾದಿ , ಬಿಜೆಪಿ ಮಹಾತ್ಮ ಗಾಂಧೀಜಿಯ ಕೊಂದವರನ್ನು ಆರಾಧನೆ ಮಾಡುವ ಇವರಿಗೆ ಮಾನವೀಯತೆ ಇದೆಯೇ ?. ಇವರು ಆತುರದಲ್ಲಿ ತಂದಂತಹ ಕಠೋರವಾದ ಕಾನೂನುಗಳು ದೇಶದ ಜನತೆಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ತಂದಿದೆ ಎಂದರು.

ಭಾರತ ದೇಶಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಎಷ್ಟು ಮುಖ್ಯವೋ,  ಮಹಾತ್ಮ ಗಾಂಧೀಜಿಯವರ ಚಿಂತನೆಯೂ ಅಷ್ಟೇ ಮುಖ್ಯ. ಜಾತ್ಯಾತೀತ ವ್ಯವಸ್ಥೆಯಲ್ಲಿ ನಂಬಿಕೆ ಇರುವವರು ಎಲ್ಲರೂ ಜಾತಿ, ಧರ್ಮ, ಮತ, ಪಕ್ಷ ಮರೆತು ಒಂದಾಗಬೇಕು. ಭಾರತ ಸಂವಿಧಾನ ರಕ್ಷಣೆ ನಮ್ಮ ಕರ್ತವ್ಯ. ಸಂವಿಧಾನದ ರಕ್ಷಣೆಗಾಗಿ ನಿಲ್ಲುವ ಎಲ್ಲಾ ವರ್ಗಗಳನ್ನು ಒಟ್ಟು ಗೂಡಿಸಿ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಾರಾಯಣಸ್ವಾಮಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ. ಜಯದೇವ್ , ಖಾದ್ರಿಪುರ ಬಾಬು,  ರಾಜ್ಯ ಜಾನಪದ ಕಲಾವಿದ ಮತ್ತಿಕುಂಟೆ ಕೃಷ್ಣಪ್ಪ, ಚೇತನ್ ಬಾಬು,  ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News