ಧರ್ಮೇಗೌಡ ಸಾವು ಪ್ರಕರಣ: ಪ್ರಾಥಮಿಕ ವರದಿ ಬಳಿಕ ಉನ್ನತ ಮಟ್ಟದ ತನಿಖೆಗೆ ತೀರ್ಮಾನ- ಗೃಹ ಸಚಿವ ಬೊಮ್ಮಾಯಿ

Update: 2020-12-31 11:58 GMT

ಬೆಂಗಳೂರು, ಡಿ. 31: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಂ.ಧರ್ಮೇಗೌಡ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ವರದಿ ಬಂದ ನಂತರ ಉನ್ನತ ಮಟ್ಟದ ತನಿಖೆಗೆ ಸರಕಾರ ನಿರ್ಧರಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದೆ. ಅವರು ಸಾವಿಗೂ ಮುನ್ನ ಬರೆದಿಟ್ಟ ಡೆತ್‍ನೋಟ್, ಆತ್ಮಹತ್ಯೆಗೆ ಕಾರಣಗಳು, ಲಭ್ಯವಿರುವ ಸಾಕ್ಷ್ಯಾಧಾರಗಳು, ಮರಣೋತ್ತರ ಪರೀಕ್ಷಾ ವರದಿ, ಪ್ರತ್ಯಕ್ಷದರ್ಶಿಗಳು ಹಾಗೂ ಸಂಬಂಧಿಕರ ಹೇಳಿಕೆಗಳನ್ನು ಪಡೆಯಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪೊಲೀಸರ ಪ್ರಾಥಮಿಕ ಹಂತದ ತನಿಖಾ ವರದಿ ನಮ್ಮ ಬಳಿ ಬಂದ ನಂತರ ಯಾವ ತನಿಖೆ ನಡೆಸಬೇಕೆಂಬುದನ್ನು ತೀರ್ಮಾನಿಸಲಾಗುವುದು ಎಂದ ಅವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಉನ್ನತ ಮಟ್ಟದ ತನಿಖೆಗೆ ಮನವಿ ಮಾಡಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಲಿದ್ದೇವೆ. ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ. ನಿಷ್ಪಕ್ಷ ತನಿಖೆ ನಡೆಸಲು ಸರಕಾರ ಸಿದ್ದವಿದೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ರೂಪಾಂತರ ಕೊರೋನ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೊಂಕು ಹರಡುವುದನ್ನು ತಡೆಗಟ್ಟುವ ಕಾರಣಕ್ಕಾಗಿ ಹೊಸ ವರ್ಷಾಚರಣೆ ವೇಳೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಜನರ ಆರೋಗ್ಯದ ದೃಷ್ಟಿಯಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ಡಿ.31ರ ಮಧ್ಯಾಹ್ನದಿಂದಲೇ ನಗರದಾದ್ಯಂತ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಾಳೆ(ಜ.1) ಮುಂಜಾನೆ 6 ಗಂಟೆಯ ವರೆಗೂ ಜಾರಿಯಲ್ಲಿದ್ದು, ಹೆಚ್ಚು ಜನರು ಗುಂಪುಗೂಡಬಾರದು, ರೂಪಾಂತರ ಕೊರೋನ ಸೋಂಕು ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಸಾಧ್ಯತೆ ಇರುವುದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ ಎಂದು ಅವರು ಸಲಹೆ ನೀಡಿದರು.

ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿ ವಿಶೇಷ ನಿಗಾ ವಹಿಸಲಿದ್ದಾರೆ. ಇಲ್ಲಿ ಪ್ರತಿವರ್ಷ ಹೆಚ್ಚಿನ ಜನರು ಸೇರುವುದರಿಂದ ಸೋಂಕು ಬಹುಬೇಗನೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾರ್ವಜನಿಕರು ಆದಷ್ಟು ತಮ್ಮ ತಮ್ಮ ಮನೆಗಳಲ್ಲೇ ಹೊಸ ವರ್ಷಾಚರಣೆ ಆಚರಿಸಿ ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News