×
Ad

ಗ್ರಾ.ಪಂ.ಚುನಾವಣೆಯಲ್ಲಿ ಜೆಡಿಎಸ್ ಗಮನಾರ್ಹ ಸಾಧನೆ: ಎಚ್.ಡಿ.ಕುಮಾರಸ್ವಾಮಿ

Update: 2020-12-31 18:19 IST

ಬೆಂಗಳೂರು, ಡಿ. 31: ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇ ಮಾಡಿದೆ. ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟ ಮತದಾರರಿಗೆ ಕೃತಜ್ಞತೆಗಳು. ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಸೋತರೂ, ಹೋರಾಟ ನಡೆಸಿದ ಅಭ್ಯರ್ಥಿಗಳಿಗೆ ನನ್ನ ಬೆಂಬಲ ಸದಾ ಇರಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ಚುನಾವಣೆಯಲ್ಲಿ ಈ ಹಂತದ ಸಾಧನೆ ಮಾಡಲು ನೆರವಾದವರು ಪಕ್ಷದ ತಳಮಟ್ಟದ ಕಾರ್ಯಕರ್ತರು. ರಾಜಕೀಯದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾರ್ಯಕರ್ತರು ಕೆಚ್ಚೆದೆಯ ಹೋರಾಟ ತೋರಿದ್ದರ ಫಲವಾಗಿಯೇ ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಿಸಿದ್ದಾರೆ. ಪಕ್ಷ ತಳ ಮಟ್ಟದಲ್ಲಿಯೂ ಸ್ಥಿರ, ದೃಢವಾಗಿದೆ ಎಂದು ತೋರಿಸಿದ ಕಾರ್ಯಕರ್ತ ಸೋದರರಿಗೆ ನಾನು ಸದಾ ಋಣಿ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗ್ರಾಮಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿ. ಸ್ವಾವಲಂಬಿ ಗ್ರಾಮೀಣ ಭಾರತದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ. ಜೆಡಿಎಸ್ ಬೆಂಬಲಿತ ಮತ್ತು ಇತರ ಸದಸ್ಯರು ತಮ್ಮ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬೇಕು ಎಂದು ನಾನು ಹೇಳಲು ಇಚ್ಛಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News