ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಿಸಲು 1,701 ಕೋಟಿ ರೂ. ಬಿಡುಗಡೆ: ಜಗದೀಶ್ ಶೆಟ್ಟರ್

Update: 2020-12-31 14:19 GMT

ಬೆಂಗಳೂರು, ಡಿ. 31: ಕರ್ನಾಟಕವನ್ನು ವಿಶ್ವದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಾಣಕ್ಕೆ ಕೇಂದ್ರ ಸರಕಾರ 1,701 ಕೋಟಿ ರೂ.ಮೀಸಲಿರಿಸಿದ್ದು, ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಿಸಬೇಕೆಂಬ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಭೆ ಅಂಗೀಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವಿಷಯಗಳ ಸಚಿವ ಸಂಪುಟ ಸಮಿತಿಯ ಈ ನಿರ್ಧಾರ ಸ್ವಾಗತಾರ್ಹ ಎಂದರು.

ಮಹತ್ವಾಕಾಂಕ್ಷೆಯ ಈ ಯೋಜನೆ ಕಾರಿಡಾರ್ ನ ಭಾಗವಾಗಿ ತುಮಕೂರು ನೋಡ್‍ಗೆ ಅನಮೋದನೆ ನೀಡಿರುವ ಪ್ರಧಾನಿ ಮೋದಿ ಮತ್ತು ಸಂಪುಟ ಸಹದ್ಯೋಗಿಗಳಿಗೆ ರಾಜ್ಯ ಸರಕಾರದ ವತಿಯಿಂದ ಅಭಿನಂದನೆ ಸಲ್ಲಿತ್ತಿದ್ದೇನೆ. ಈ ಯೋಜನೆಯ ಅನುಷ್ಟಾನದಿಂದ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ರಾಜ್ಯದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ಕೈಗಾರಿಕಾ ಕ್ಷೇತ್ರ ಮತ್ತಷ್ಟು ಉತ್ತುಂಗವನ್ನು ತಲುಪಲಿದೆ. ನಿರುದ್ಯೋಗಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. ಈ ಯೋಜನೆಯಿಂದಾಗಿ ಹಲವಾರು ಬಗೆಯ ಉದ್ಯಮಗಳು ಪ್ರಾರಂಭವಾಗಲಿದ್ದು, ದೇಶ-ವಿದೇಶಗಳ ಹೂಡಿಕೆಗೆ ಯಥೇಚ್ಚವಾದ ಅವಕಾಶಗಳು ತೆರೆದುಕೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಚೆನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾದ ತುಮಕೂರು ಇಂಡಸ್ಟ್ರೀಯಲ್ ನೋಡ್‍ನಿಂದ 88,500 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ. ಅಲ್ಲದೆ, ಕಾರಿಡಾರ್ ನ ಆರಂಭಿಕ ಹಂತದಲ್ಲಿ ಚಿಲ್ಲರೆ ವ್ಯಾಪಾರ, ಕಚೇರಿಗಳು ಮತ್ತು ಇತರೆ ವಾಣಿಜ್ಯ ಅವಕಾಶಗಳಂತಹ ಸೇವಾ ವಲಯದಲ್ಲಿ 17,700 ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಆತ್ಮನಿರ್ಭರ ಭಾರತದ ಗುರಿಯನ್ನು ಮುಟ್ಟುವ ಉದ್ದೇಶವನ್ನು ಈ ಯೋಜನೆಯು ಹೊಂದಿದ್ದು, ಈ ಕಾರಿಡಾರ್ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ ದೇಶೀಯ ಒಟ್ಟು ಉತ್ಪನ್ನ ಜಿಡಿಪಿಗೆ ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಅವರು ಹೇಳಿದರು.

ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ಕೈಗಾರಿಕಾ ಸ್ನೇಹೀ ವಾತಾವರಣ ನಿರ್ಮಾಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿ 2020- 2025 ರಾಜ್ಯದಲ್ಲಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ನಿರ್ಮಾಣಕ್ಕೆ ಸೂಕ್ತ ವೇದಿಕೆ ಕಲ್ಪಿಸಲಿದೆ. ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ಮೂಲಕ ರಾಜ್ಯದ ಆರ್ಥಿಕತೆ ಹಾಗೂ ಉದ್ಯೋಗಾವಕಾಶಗಳನ್ನು ಅಭಿವೃದ್ದಿಗೊಳಿಸುವುದು ನಮ್ಮ ಸರಕಾರದ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಸರಕಾರದಿಂದ ಇಂತಹ ಪೂರಕ ನಿರ್ಧಾರಗಳು ನಮ್ಮಲ್ಲಿ ಮತ್ತಷ್ಟು ಉತ್ಸಾಹವನ್ನು ತುಂಬಲಿವೆ ಎಂದು ಅವರು ತಿಳಿಸಿದರು.

ರಾಜ್ಯ ಬಂಡವಾಳ ಹೂಡಿಕೆಯನ್ನು ದೇಶದಲ್ಲೆ ಮೊದಲ ಸ್ಥಾನವನ್ನು ಹೊಂದಿದ್ದು, ಕೈಗಾರಿಕಾಭಿವೃದ್ದಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕ ರಾಜ್ಯ 250 ಬಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದು ಬಹಳ ವೇಗವಾಗಿ ಅಭಿವೃದ್ದಿಯನ್ನು ಹೊಂದುತ್ತಿದೆ. ಅಲ್ಲದೆ, ರಾಜ್ಯ ಮಷೀನ್ ಟೂಲ್ಸ್, ಹೇವಿ ಮಷಿನರಿ, ಅಟೋಮೊಬೈಲ್ಸ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News