ರಾಜ್ಯದಲ್ಲಿಯೂ ತೆರೆದ ಕಾಲುವೆ ಮುಚ್ಚಿ ವಿದ್ಯುತ್ ಉತ್ಪಾದಿಸಲು ಸಿಎಂಗೆ ನಟ ಅನಿರುದ್ಧ ಮನವಿ
ಬೆಂಗಳೂರು, ಡಿ. 31: ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ರಾಜ್ಯದ ಮಾದರಿಯಲ್ಲೆ ರಾಜ್ಯದಲ್ಲಿಯೂ ವಿದ್ಯುತ್ ಉತ್ಪಾದನೆಗೆ ಮುಂದಾಗುವ ಮೂಲಕ ತೆರೆದ ಕಾಲುವೆಗಳನ್ನು ಮುಚ್ಚಬೇಕು ಎಂದು ಚಿತ್ರನಟ ಅನಿರುದ್ಧ ಜತ್ಕರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಗುಜರಾತ್ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಸೌರಫಲಕಗಳನ್ನು ಬಳಸಿ, ಎರಡೂ ಬದಿಯಲ್ಲಿ ಗೋಡೆಗಳನ್ನು ನಿರ್ಮಿಸಿ ವರ್ಟಿಕಲ್ ಗಾರ್ಡನಿಂಗ್ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು.
ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು. ಇದರಿಂದ ಬರಡುಭೂಮಿಯಲ್ಲಿ ತೆರೆದ ಕಾಲುವೆಗಳನ್ನು ಸೌರ ವಿದ್ಯುತ್ ಅಳವಡಿಸುವುದರಿಂದ ಬೆಳೆ ಬೆಳೆದು, ನೆಲ ಹಸನು ಮಾಡಬಹುದು. ಹೀಗೆ ತೆರೆದ ಕಾಲುವೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಒಂದೆಡೆ ವಿದ್ಯುತ್ ಉತ್ಪಾದನೆ ಮತ್ತೊಂದೆಡೆ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಸರಕಾರ ಗುಜರಾತ್ ಮಾದರಿಯನ್ನು ಒಮ್ಮೆ ಅವಲೋಕಿಸಿ ನಮ್ಮ ರಾಜ್ಯದಲ್ಲಿಯೂ ಈ ಬಗ್ಗೆ ಅಳವಡಿಸುವ ಕುರಿತು ಚಿಂತನೆ ನಡೆಸಬೇಕೆಂದು ಸರಕಾರಕ್ಕೆ ಅನಿರುದ್ಧ ಮನವಿ ಮಾಡಿದ್ದಾರೆ.