ಚೀನಾ ಜೊತೆ ಅರ್ಥಪೂರ್ಣ ಮಾತುಕತೆಗೆ ಸಿದ್ಧ

Update: 2021-01-01 15:29 GMT

ತೈಪೇ (ತೈವಾನ್), ಜ. 1: ಚೀನಾವು ಘರ್ಷಣಾ ಮನೋಭಾವದಿಂದ ಹಿಂದೆ ಸರಿಯುವುದಾದರೆ, ಅದರ ಜೊತೆಗೆ ಸಮಾನತೆಯ ನೆಲೆಯಲ್ಲಿ ‘ಅರ್ಥಪೂರ್ಣ ಮಾತುಕತೆ’ಯನ್ನು ನಡೆಸಲು ತೈವಾನ್ ಸಿದ್ಧವಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಶುಕ್ರವಾರ ಹೇಳಿದ್ದಾರೆ.

ಅವರು ತನ್ನ ಹೊಸ ವರ್ಷದ ಭಾಷಣದಲ್ಲಿ ಚೀನಾದೊಂದಿಗೆ ಮಾತುಕತೆಯ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ತೈವಾನ್ ತನಗೆ ಸೇರಿದ್ದೆಂದು ಚೀನಾ ಪ್ರತಿಪಾದಿಸುತ್ತಿದೆ. ತೈವಾನ್ ದ್ವೀಪದ ಸಮೀಪ ಚೀನಾವು ಇತ್ತೀಚಿನ ವರ್ಷಗಳಲ್ಲಿ ತನ್ನ ಸೈನಿಕ ಚಟುವಟಿಕೆಗಳನ್ನು ಹೆಚ್ಚಿಸಿದ್ದು, ದ್ವೀಪ ರಾಷ್ಟ್ರದ ಮೇಲೆ ಒತ್ತಡ ಹೇರುತ್ತಿದೆ.

ತೈವಾನ್ ಜೊತೆಗೆ ಅಮೆರಿಕ ಶಾಮೀಲಾಗಿರುವುದಕ್ಕೆ ತಾನು ಪ್ರತಿಕ್ರಿಯೆಯನ್ನಷ್ಟೆ ನೀಡುತ್ತಿದ್ದೇನೆ ಎಂದು ಚೀನಾ ಹೇಳುತ್ತಿದೆ. ತೈವಾನ್‌ಗೆ ಅಮೆರಿಕ ನೀಡುತ್ತಿರುವ ಬೆಂಬಲದಿಂದ ಚೀನಾ ಆಕ್ರೋಶಗೊಂಡಿದೆ. ಇದು ತೈವಾನ್ ಅಧಿಕೃತವಾಗಿ ಸ್ವಾತಂತ್ರ್ಯ ಘೋಷಿಸುವುದಕ್ಕೆ ಪೂರ್ವಭಾವಿ ಕ್ರಮವಾಗಿದೆ ಎಂದು ಚೀನಾ ಭಾವಿಸಿದೆ.

ಅಧ್ಯಕ್ಷೀಯ ಕಚೇರಿಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ತೈವಾನ್ ಅಧ್ಯಕ್ಷೆ, ತೈವಾನ್ ಸಮೀಪ ಚೀನಾ ನಡೆಸುತ್ತಿರುವ ಸೇನಾ ಚಟುವಟಿಕೆಗಳು ಹಿಂದೂ ಮಹಾಸಾಗರ-ಪೆಸಿಫಿಕ್ ವಲಯದ ಸ್ಥಿರತೆಗೆ ಬೆದರಿಕೆಯಾಗಿವೆ ಎಂದು ಬಣ್ಣಿಸಿದ್ದಾರೆ.

 ‘‘ವೈರತ್ವನ್ನು ಕೊನೆಗೊಳಿಸಲು ಹಾಗೂ ಸಂಬಂಧಗಳನ್ನು ಸುಧಾರಿಸಲು ಚೀನಾದ ಆಡಳಿತಗಾರರು ನಿರ್ಧರಿಸಿದರೆ, ಪರಸ್ಪರ ಸಹಕಾರ ಮತ್ತು ಘನತೆಯ ತತ್ವಗಳಡಿಯಲ್ಲಿ ಅದರ ಜೊತೆ ಅರ್ಥಪೂರ್ಣ ಮಾತುಕತೆ ನಡೆಸಲು ನಾವು ಸಿದ್ಧರಾಗಿದ್ದೇವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News