ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ: 8 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು, ಜ. 2: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳ ಚುನಾವಣೆ ನಡೆಯಲಿದ್ದು, ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್.ಎ.ಹಾರಿಸ್ ಪುತ್ರ ಎಂ.ಡಿ.ನಲಪಾಡ್ ಹಾಗೂ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಥುನ್ ರೈ ಹಾಗೂ ಎನ್‍ಎಸ್‍ಯುಐ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಪಕ್ಷದ ಯುವ ಕಾರ್ಯಕರ್ತರಿಗಿಂತಲೂ ಕಾಂಗ್ರೆಸ್ ಪಕ್ಷದ ಹಿರಿಯರು ಸಕ್ರಿಯವಾಗಿರುವುದರಿಂದ ಈಗ ರಾಜ್ಯ ಕಾಂಗ್ರೆಸ್ ಹಿರಿಯರಲ್ಲೆ ಜಿದ್ದಾಜಿದ್ದಿ ನಡೆಯುತ್ತಿದೆ. ಮುಂದಿನ ತಿಂಗಳು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅವಧಿ ಡಿ.31ಕ್ಕೆ ಅಂತ್ಯಗೊಂಡಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೂರು ಮಂದಿ ಯುವತಿಯರು ಸೇರಿದಂತೆ 16 ಮಂದಿ ಅರ್ಹ ಅಭ್ಯರ್ಥಿಗಳಾಗಿದ್ದು, ಆ ಪೈಕಿ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಮುಂದಿನ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗಬೇಕೆಂಬುದರ ಬಗ್ಗೆ ಯುವ ಮುಖಂಡರಿಗಿಂತಲೂ ಹಿರಿಯರು ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ.
ಬಿಜೆಪಿ ಆಡಳಿತ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಭವಿಷ್ಯದಲ್ಲಿ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಒಲವು ಗಳಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಅಭಿಮತವಾಗಿದೆ. ಹೀಗಾಗಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನು ಸೃಷ್ಟಿಸಿದೆ.