×
Ad

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯ ಸರಕಾರ ಸಿದ್ಧ: ಸಚಿವ ಡಾ.ಕೆ.ಸುಧಾಕರ್

Update: 2021-01-02 18:34 IST

ಬೆಂಗಳೂರು, ಜ.2: ಕೋವಿಡ್ ಲಸಿಕೆ ಹಾಕುವ ಅಣಕು ಕಾರ್ಯದಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಜನವರಿಯಲ್ಲೆ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕ ಬಳಿಕ ಅದನ್ನು ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಶನಿವಾರ ನಗರದ ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ವಿತರಣೆಯ ಅಣಕು ಕಾರ್ಯವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಐದು ಕಡೆ ಲಸಿಕೆ ನೀಡುವ ಅಣಕು ಪ್ರಯೋಗ ನಡೆಯುತ್ತಿದೆ. ಯಲಹಂಕ ಆಸ್ಪತ್ರೆಯಲ್ಲಿ 25 ಮಂದಿಗೆ (ಅಣಕು) ಲಸಿಕೆ ನೀಡಲಾಗುತ್ತಿದೆ. ಶಿಷ್ಟಾಚಾರದಂತೆ ಲಸಿಕೆ ಹಾಕುವ ಅಣಕು ಪ್ರಕ್ರಿಯೆ ನಡೆಯುತ್ತಿದೆ. ಲಸಿಕೆ ಬಂದ ಬಳಿಕ ಈ ಅಭ್ಯಾಸ ನೆರವಾಗಲಿದೆ. ಜನವರಿಯಲ್ಲೆ ಲಸಿಕೆ ದೊರೆಯುವ ನಿರೀಕ್ಷೆ ಇದೆ. ಕಳೆದ ಎರಡು ತಿಂಗಳಿಂದ ಸಭೆ ನಡೆಸಿ, ಆಸ್ಪತ್ರೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕೊರೋನ ಲಸಿಕೆಯನ್ನು ಕೊರೋನ ಯೋಧರಿಗೆ ಮೊದಲ ಹಂತದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ನೀಡಲಿದೆ. ಅದರಂತೆ, ಕ್ರಮ ವಹಿಸಲಾಗುವುದು. ಲಸಿಕೆ ವಿತರಣೆಗೆ ಬೇಕಾದ ಕೋಲ್ಡ್ ಸ್ಟೋರೇಜ್, ಸಾರಿಗೆ ವ್ಯವಸ್ಥೆ, ಸಿಬ್ಬಂದಿ ನೇಮಕ ಮೊದಲಾದ ಸಿದ್ಧತೆ ಪೂರ್ಣಗೊಂಡಿದೆ. ಬೇರೆ ಲಸಿಕೆಗಳನ್ನು ವಿತರಿಸಲು ಬೇಕಿರುವ ಮೂಲಸೌಕರ್ಯಗಳು ನಮ್ಮಲ್ಲಿವೆ. ಇದನ್ನು ಕೂಡ ಕೊರೋನ ಲಸಿಕೆ ಸಂಗ್ರಹ, ವಿತರಣೆಗೆ ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೋವಿಡ್ ಲಸಿಕೆ ವಿತರಣೆಗೆ ಬೇಕಾದ ಹೆಚ್ಚುವರಿ ಮೂಲಸೌಕರ್ಯವನ್ನು ಕೇಂದ್ರ ಸರಕಾರ ನೀಡಲಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಸುಧಾಕರ್ ತಿಳಿಸಿದರು.

ಯುಕೆಯಿಂದ ಬಂದ 10 ಮಂದಿಗೆ ರೂಪಾಂತರ ಕೊರೋನ

ಯುನೈಟೆಡ್ ಕಿಂಗ್ ಡಮ್‍ನಿಂದ ಬಂದವರಲ್ಲಿ 42 ರಲ್ಲಿ 32 ಮಂದಿಗೆ ಕೊರೋನ ಪಾಸಿಟಿವ್ ಆಗಿತ್ತು. 10 ಜನರಿಗೆ ರೂಪಾಂತರಗೊಂಡ ಕೊರೋನ ವೈರಾಣು ಇರುವುದು ದೃಢವಾಗಿದೆ. ಈ ಹತ್ತು ಮಂದಿಗೆ ತೀವ್ರವಾದ ಸಮಸ್ಯೆ ಇಲ್ಲ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಬೇಗನೆ ಗುಣಮುಖರಾಗುವ ವಿಶ್ವಾಸವಿದೆ. ಈಗ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. 12 ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ. ಇದೇ ರೀತಿ ಇದ್ದರೆ, ಕೊರೋನದಿಂದ ಆಪತ್ತು ಎದುರಿಸುವ ದಿನ ದೂರವಾಗಿದೆ ಎನ್ನಬಹುದು.

-ಡಾ. ಕೆ.ಸುಧಾಕರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News