ಸಿಎಂ ಸ್ಥಾನದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2021-01-02 13:11 GMT

ಚಿಕ್ಕಮಗಳೂರು, ಜ.2: ಮುಖ್ಯಮಂತ್ರಿ ಕುರ್ಚಿ ಅಲ್ಲಾಡುವ ಖುರ್ಚಿಯಲ್ಲ, ಅದು ಸ್ಥಿರವಾಗಿದೆ. ಈ ಸಂಬಂಧ ಯಾವುದೇ ಅನುಮಾನಗಳೂ ಬೇಡ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸಿಎಂ ಕುರ್ಚಿ ಅಲ್ಲಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಶನಿವಾರ ಚಿಕ್ಕಮಗಳೂರು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಕೆಲವರ ತಲೆ ಯಾವಾಗಲೂ ಅಲ್ಲಾಡಿಸುತ್ತಿರುತ್ತಾರೆ. ಅಂತವರಿಗೆ ಜಗತ್ತೆಲ್ಲ ಅಲ್ಲಾಡಿದಂತೆ ಕಾಣುತ್ತಿರುತ್ತದೆ. ಸಿಎಂ ಖುರ್ಚಿ ಸಿದ್ದರಾಮಯ್ಯ ಅವರಿಗೆ ರಾತ್ರಿ ಹೊತ್ತು ಅಲ್ಲಾಡುತ್ತಿರುವುದು ಕಾಣುತ್ತಿದೆಯೋ ಹಗಲು ಹೊತ್ತು ಅಲ್ಲಾಡುತ್ತಿರುವುದು ಕಾಣುತ್ತಿದೆಯೋ ಎಂದು ಅವರೇ ಸ್ಪಷ್ಟವಾಗಿ ಹೇಳಬೇಕು ಎಂದು ವ್ಯಂಗ್ಯವಾಡಿದರು.

ರಾಜ್ಯ ಸರಕಾರದ ಬಾಕಿ ಇರುವ ಎರಡೂವರೆ ವರ್ಷಗಳ ಆಡಳಿತಕ್ಕೆ ಚುರುಕು ಮುಟ್ಟಿಸುವ ಹೊಣೆಗಾರಿಕೆ ಸಿಎಂ ಮತ್ತು ಸಚಿವ ಸಂಪುಟದ ಸದಸ್ಯರ ಮೇಲಿದೆ. ಸರಕಾರ ಮತ್ತಷ್ಟು ಜನಸ್ನೇಹಿ ಆಡಳಿತ ನೀಡುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಲೆ ನಿರ್ಮಾಣವಾಗಬೇಕು. ಆ ರೀತಿ ಆಡಳಿತ ನೀಡಲು ಅಗತ್ಯವಿರುವ ರೂಪುರೇಷೆಗಳ ಚರ್ಚೆ ಕಾರ್ಯಕಾರಣಿ ಸಭೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಯತ್ನಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜ.4 ಮತ್ತು 5ರಂದು ಸಿಎಂ ಶಾಸಕರ ಸಭೆಯನ್ನು ವಿಭಾಗವಾರು ಕರೆದಿದ್ದಾರೆ. ಸಿಎಂ ಯಾವಾಗ ಬೇಕಾದರೂ ಶಾಸಕಾಂಗ ಸಭೆಯನ್ನು ಕರೆಯಬಹುದು. ಮುಂದೆ ಬರುವ ವಿಧಾನಸಭೆ ಅಧಿವೇಶನಕ್ಕೂ ಮುಂಚೆಯೇ ಶಾಸಕಾಂಗ ಸಭೆಯನ್ನು ಕರೆಯುತ್ತಾರೆ ಎಂದರು.

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಮುಂಬರುವ ಜಿಪಂ, ತಾಪಂ, ಪುರಸಭೆ, ನಗರಸಭೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಗ್ರಾಪಂ ಚುನಾವಣೆ ಸಹಕಾರಿಯಾಗಲಿದೆ ಎಂದು ಇದೇ ವೇಳೆ ಸಿ.ಟಿ.ರವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News