ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾವಾರು ಮೀಸಲಾತಿ ಮಾರ್ಗಸೂಚಿ ಪಟ್ಟಿ ಪ್ರಕಟ
ಬೆಂಗಳೂರು, ಜ. 2: ರಾಜ್ಯದ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶದ ಬೆನ್ನಲ್ಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜಿಲ್ಲಾವಾರು ಮೀಸಲಾತಿ ಮಾರ್ಗಸೂಚಿ ಪಟ್ಟಿ ಪ್ರಕಟಿಸಿ ರಾಜ್ಯ ಸರಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
'ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ'ದನ್ವಯ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಆದೇಶಕ್ಕೆ ಅನುಗುಣವಾಗಿ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿಯನ್ನು ನಿಗದಿಪಡಿಸಬೇಕು. ಅಲ್ಲದೆ, ಈ ಹಿಂದೆ ಇದ್ದ 5 ವರ್ಷದ ಅಧಿಕಾರಾವಧಿಗೆ ಬದಲು ಇದೇ ಮೊದಲ ಬಾರಿಗೆ 30 ತಿಂಗಳ (ಎರಡೂವರೆ ವರ್ಷ) ಮೊದಲನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ರಾಜ್ಯದ 5,956 ಗ್ರಾ.ಪಂ.ಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಆಯಾ ಪಂಚಾಯತ್ನ ಚುನಾಯಿತ ಸದಸ್ಯರಿಂದ ಸಮಾನ ಮತ ಪಡೆದ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.
ಮೀಸಲಾತಿಗೆ ಆದ್ಯತೆ: ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಸಂಖ್ಯೆ ಯಾವ ಅನುಪಾತದಲ್ಲಿಯೂ ಅಂತಹ ಹುದ್ದೆಗಳ ಸಂಖ್ಯೆ ರಾಜ್ಯದಲ್ಲಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಒಟ್ಟು ಸಂಖ್ಯೆಯಲ್ಲಿ ಸರಿ ಸುಮಾರು ಅದೇ ಅನುಪಾತದಲ್ಲಿರತಕ್ಕದ್ದು ಎಂದು ಸೂಚಿಸಲಾಗಿದೆ.
1/3ರ ಸಂಖ್ಯೆಯಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು, ಹೀಗೆ ನಿಗದಿಪಡಿಸುವ ವೇಳೆ ಎಸ್ಸಿ-ಎಸ್ಟಿ ಮತ್ತು ಒಬಿಸಿಗೆ ಮೀಸಲಾದ ಒಟ್ಟು ಹುದ್ದೆಗಳು ರಾಜ್ಯದ ಗ್ರಾ.ಪಂ. ಒಟ್ಟು ಹುದ್ದೆಗಳ ಸಂಖ್ಯೆ ಶೇ.50ಕ್ಕೆ ಮೀರತಕ್ಕದಲ್ಲ. ಅಲ್ಲದೆ, ಮಹಿಳಾ ಮೀಸಲು ಹುದ್ದೆಗಳು ಶೇ.50ಕ್ಕಿಂತ ಹೆಚ್ಚಿದ್ದರೆ ಸಾಮಾನ್ಯ ವರ್ಗದ ಮಹಿಳೆಗೆ ನಿಗದಿಪಡಿಸಬೇಕು.
ಅಧ್ಯಕ್ಷ-ಉಪಾಧ್ಯಕ್ಷ ಒಂದೇ ವರ್ಗಕ್ಕೆ ಬೇಡ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ(ಎಸ್ಟಿ), ಒಬಿಸಿ (ಅ), ಒಬಿಸಿ(ಬ), ಸಾಮಾನ್ಯ(ಮಹಿಳೆ) ಮತ್ತು ಸಾಮಾನ್ಯ ಈ ಕ್ರಮದಲ್ಲಿಯೇ ನಿಗದಿಪಡಿಸತಕ್ಕದ್ದು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸುವ ವೇಳೆ ಒಂದೇ ಗ್ರಾ.ಪಂ.ಯಲ್ಲಿ ಎಸ್ಸಿ-ಎಸ್ಟಿ, ಎಸ್ಸಿ-ಎಸ್ಸಿ, ಎಸ್ಟಿ-ಎಸ್ಸಿ, ಎಸ್ಟಿ-ಎಸ್ಟಿ, ಒಬಿಸಿ-ಒಬಿಸಿ, ಮಹಿಳೆ–ಮಹಿಳೆ. ಈ ವರ್ಗಗಳು ಏಕಕಾಲದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಗದಿಪಡಿಸತಕ್ಕದ್ದಲ್ಲ. ತಾಲೂಕುವಾರು ಮೊದಲು ಅಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಿದ ಬಳಿಕ ಉಪಾಧ್ಯಕ್ಷ ಸ್ಥಾನ ನಿಗದಿಪಡಿಸತಕ್ಕದ್ದು.
ಹೊಸದಾಗಿ ರಚಿತವಾಗಿರುವ ಗ್ರಾ.ಪಂ.ಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದು ನಿರ್ಧರಿಸತಕ್ಕದ್ದು, ಮೀಸಲಾತಿ ಪ್ರಕಟಿಸಿದ ಬಳಿಕ ಗ್ರಾ.ಪಂ.ವಾರು ಪೂರ್ಣ ವಿವರ ಮತ್ತು ಮೀಸಲಾತಿ ಸಮರ್ಥನೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ.
ಗೆಲುವು
ರಾಜ್ಯದ 5,728 ಗ್ರಾ.ಪಂ.ಗಳ ಒಟ್ಟು 91,339 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 32,829, ಬಿಜೆಪಿ ಬೆಂಬಲಿತ-30,853, ಜೆಡಿಎಸ್ ಬೆಂಬಲಿತ-16,841 ಹಾಗೂ ಪಕ್ಷೇತರರು- 10,816 ಮಂದಿ ಆಯ್ಕೆಯಾಗಿದ್ದಾರೆಂದು ಹೇಳಲಾಗಿದೆ. 8,074 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.