ಅಂಗಡಿ, ವಾಣಿಜ್ಯ ಸಂಸ್ಥೆಗಳು 24X7 ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ ರಾಜ್ಯ ಸರಕಾರ

Update: 2021-01-02 16:15 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.2: ರಾಜ್ಯ ಸರಕಾರವು ‘ಕರ್ನಾಟಕ ಶಾಪ್ಸ್ ಅಂಡ್ ಕಮರ್ಷಿಯಲ್ ಎಸ್ಟಾಬ್‍ಲಿಷ್‍ಮೆಂಟ್ ಆಕ್ಟ್’ ಅಡಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಎಲ್ಲ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ದಿನದ 24 ಗಂಟೆಯೂ ವರ್ಷದ ಎಲ್ಲ ದಿನಗಳು ತೆರೆಯಲು ಶನಿವಾರ ಅನುಮತಿ ನೀಡಿದೆ. ಈ ಅಧಿಸೂಚನೆಯು ಗೆಜೆಟ್‍ನಲ್ಲಿ ಪ್ರಕಟಗೊಂಡ ದಿನದಿಂದ ಶರತ್ತುಗಳಿಗೆ ಒಳಪಟ್ಟು ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ.

ಕೆಲಸ ಮಾಡುವ ಉದ್ಯೋಗಿಗಳು ವಾರದ ರಜೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆಯು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು. ಉದ್ಯೋಗಿಗಳ ವಿವರವನ್ನು ಸಂಸ್ಥೆಯ ಆವರಣದಲ್ಲಿ ಕಾಣುವಂತೆ ಪ್ರದರ್ಶಿಸಬೇಕು. ರಜೆಯಲ್ಲಿ ಇರುವ ಸಿಬ್ಬಂದಿಯ ವಿವರವನ್ನು ಪ್ರದರ್ಶಿಸಬೇಕು. ನಿಗದಿತ ಅವಧಿಗಿಂತ ಹೆಚ್ಚು ಅವಧಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೀಡುವ ಹೆಚ್ಚುವರಿ ಭತ್ತೆಯನ್ನು ಉದ್ಯೋಗಿಯ ಬ್ಯಾಂಕಿನ ಉಳಿತಾಯ ಖಾತೆಗೆ ಜಮೆ ಮಾಡಬೇಕು.

ಉದ್ಯೋಗಿಗಳಿಗೆ ದಿನವೊಂದಕ್ಕೆ ಎಂಟು ಗಂಟೆ ಹಾಗೂ ವಾರದಲ್ಲಿ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವಂತೆ ಒತ್ತಾಯಿಸುವಂತಿಲ್ಲ. ಹೆಚ್ಚುವರಿ ಅವಧಿ ಸೇರಿದಂತೆ ಉದ್ಯೋಗದ ಅವಧಿಯು 50 ಗಂಟೆ ಮೀರಬಾರದು. ರಜಾ ದಿನಗಳಲ್ಲಿ ಹಾಗೂ ಸಾಮಾನ್ಯ ಉದ್ಯೋಗದ ಅವಧಿಯನ್ನು ಮೀರಿ ಸಕಾರಣವಿಲ್ಲದೆ ಕೆಲಸ ಮಾಡುತ್ತಿರುವುದು ಕಂಡು ಬಂದಲ್ಲಿ ಉದ್ಯೋಗ ನೀಡಿದವರು ಅಥವಾ ವ್ಯವಸ್ಥಾಪಕರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು.

ಮಹಿಳಾ ಉದ್ಯೋಗಿಗಳನ್ನು ಸಾಮಾನ್ಯ ಸಂದರ್ಭಗಳಲ್ಲಿನ ಯಾವುದೆ ದಿನ ರಾತ್ರಿ 8 ಗಂಟೆಯ ನಂತರ ಕೆಲಸ ಮಾಡಲು ಅವಕಾಶ ನೀಡುವಂತಿಲ್ಲ. ಮಹಿಳಾ ಉದ್ಯೋಗಿಯಿಂದ ಲಿಖಿತ ಒಪ್ಪಿಗೆ ಪಡೆದ ನಂತರ ಉದ್ಯೋಗದಾತರು ಮಹಿಳೆಯ ಘನತೆ, ಗೌರವ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಸರಕಾರ ಸ್ಪಷ್ಟಪಡಿಸಿದೆ.

ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಉದ್ಯೋಗಿಗಳಿಗೆ ಶೌಚಾಲಯ, ಸುರಕ್ಷಾ ಲಾಕರ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಎಲ್ಲ ಸಂಸ್ಥೆಗಳು ಆಂತರಿಕವಾಗಿ ದೂರು ಸ್ವೀಕಾರ ಸಮಿತಿಯನ್ನು ರಚನೆ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಸಂಧ್ಯಾ ಎಲ್.ನಾಯಕ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News