ಮಾದರಿ ಗ್ರಾಮ ಪಂಚಾಯತ್‍ಗೆ 10 ಲಕ್ಷ ರೂ. ವಿಶೇಷ ಅನುದಾನ: ಸಿ.ಟಿ.ರವಿ

Update: 2021-01-02 17:02 GMT

ಚಿಕ್ಕಮಗಳೂರು, ಜ.2: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರು ಬೀಗಬಾರದು, ಬಾಗಬೇಕು. ಗೆದ್ದು ಬೀಗುವವರು ಅಳಿಯುತ್ತಾರೆ, ಬಾಗುವವರು ಉಳಿಯುತ್ತಾರೆ. ಬಿಜೆಪಿ ಗ್ರಾಪಂ ಸದಸ್ಯರು ಅಧಿಕಾರ ಹಿಡಿದಿರುವ ಪಂಚಾಯತ್ ಅನ್ನು ಮಾದರಿ ಗ್ರಾ.ಪಂ. ಮಾಡಿದಲ್ಲಿ ಆ ಪಂಚಾಯತ್‍ಗೆ 10 ಲಕ್ಷ ರೂ. ವಿಶೇಷ ಅನುದಾನ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಗ್ರಾಪಂ ಸದಸ್ಯರಿಗೆ ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯರು ಗ್ರಾಮೀಣ ಭಾಗದಲ್ಲಿ ಮುಂದಿನ 5 ವರ್ಷಗಳ ಕಾಲ ಜನರೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು. ರಾಜ್ಯ, ಕೇಂದ್ರ ಸರಕಾರಗಳ ಯೋಜನೆ, ಸೌಲಭ್ಯಗಳನ್ನು ಪಕ್ಷಾತೀತವಾಗಿ, ಸ್ವಜನಪಕ್ಷಪಾತ ಧೋರಣೆ ಅನುಸರಿಸದೇ ತಲುಪಿಸಬೇಕು. ಇದರೊಂದಿಗೆ ತಮ್ಮ ಕ್ಷೇತ್ರದ ಜನರ ಸುಖ, ದುಃಖಗಳಲ್ಲೂ ಸಮಾನವಾಗಿ ಭಾಗಿಯಾಗಬೇಕು. ಇಂತಹ ನಡವಳಿಕೆಯಿಂದ ಗ್ರಾಪಂ ಸದಸ್ಯರು ಜನರ ಮನಸು ಗೆಲ್ಲಲು ಸಾಧ್ಯ. ಗೆದ್ದಿದ್ದೇವೆ ಎಂದು ಬೀಗದೇ ಜನರ ಮುಂದೆ ಬಾಗಿದಾಗ ಮುಂದಿನ ಚುನಾವಣೆಯಲ್ಲೂ ಜನರ ಆಯ್ಕೆ ನಿಮ್ಮದೇ ಆಗಿರುತ್ತದೆ ಎಂದರು.

ಇದುವರೆಗೂ ಜಿಲ್ಲೆಯಲ್ಲಿ ತಾಪಂ, ಜಿಪಂ, ನಗರಸಭೆ, ಪುರಸಭೆಯಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ಪಕ್ಷ ರಾಜ್ಯ, ಕೇಂದ್ರದಲ್ಲೂ ಅಧಿಕಾರ ಹಿಡಿಯುವಂತಾಗಿತ್ತು. ಈಗ ಹಳ್ಳಿಯಿಂದ ದಿಲ್ಲಿಯವರೆಗೂ ಬಿಜೆಪಿಯ ಅಧಿಕಾರವಿದೆ. ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಡಳಿತ ನಡೆಸಲಿದ್ದಾರೆ. ಗ್ರಾಪಂ ಸದಸ್ಯರು ಪಂಚಾಯತ್ ಆಡಳಿತದ ವೈಖರಿಯನ್ನು ಮೊದಲು ಅರಿಯಬೇಕು. ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಮಾದರಿ ಗ್ರಾಪಂ ನಿರ್ಮಾಣಕ್ಕೆ ಶ್ರಮಿಸಬೇಕೆಂದ ಅವರು, ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯತ್‍ಗೆ 10 ಲಕ್ಷ ರೂ.ಅನುದಾನ ನೀಡಲು ಚಿಂತಿಸಲಾಗಿದ್ದು, ಮಾದರಿ ಗ್ರಾಪಂ ಸದಸ್ಯನಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಜಸಿಂತಾ ಅನಿಲ್‍ ಕುಮಾರ್ ಮಾತನಾಡಿ, ಈ ಬಾರಿ ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿರುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೆದ್ದ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತು ಎಂಬ ಮಹಿಳಾ ಸದಸ್ಯರು ಭಾವಿಸದೆ ಗ್ರಾಪಂ ಆಡಳಿತದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಮಾದರಿ ಗ್ರಾಪಂ ನಿರ್ಮಾಣ ಮಾಡುವ ಮೂಲಕ ಸಾಬೀತು ಮಾಡಬೇಕೆಂದರು.

ಜಿಪಂ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ನಡೆದ 194 ಗ್ರಾಪಂ ಚುನಾವಣೆಯಲ್ಲಿ 135 ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಪಕ್ಷ ಬೆಂಬಲಿತರೇ ಆಡಳಿತ ಹಿಡಿದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಶೇ.70ರಷ್ಟು ಬಿಜೆಪಿ ಕಾರ್ಯಕರ್ತರೇ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗೆದ್ದವರು ಪಕ್ಷದ ಸೈದ್ಧಾಂತಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತುನೀಡಬೇಕೆಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೇಮ್‍ ಕುಮಾರ್, ತಾಪಂ ಸದಸ್ಯ ಈಶ್ವರಹಳ್ಳಿ ಮಹೇಶ್ ಮತ್ತಿತರರು ಮಾತನಾಡಿದರು. ಇದೇ ವೇಳೆ ಗ್ರಾಪಂ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಸನ್ಮಾನಿಸಲಾಯಿತು.

ಜಿಪಂ ಉಪಾಧ್ಯಕ್ಷ ಸೋಮಶೇಖರ್, ಜಿಪಂ ಸದಸ್ಯರಾದ ವಿಜಯ್‍ಕುಮಾರ್, ಹಿರಿಗಯ್ಯ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ಬಿಜೆಪಿ ನಗರಾಧ್ಯಕ್ಷ ಮಧುಕುಮಾರ್ ರಾಜ್ ಅರಸ್, ನಗರಸಭೆ ಮಾಜಿ ಸದಸ್ಯ ರಾಜ್‍ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News