ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ: ಬಂದೋಬಸ್ತ್ ಗೆ ಬಂದಿದ್ದಾಗ ಕಾರು ಢಿಕ್ಕಿಯಾಗಿ ಪೇದೆ ಮೃತ್ಯು
ಶಿವಮೊಗ್ಗ, ಜ.2: ಬಿಜೆಪಿ ಕಾರ್ಯಕಾರಿಣಿ ಹಾಗೂ ವಿಶೇಷ ಸಭೆಯ ಬಂದೋಬಸ್ತ್ ಗೆ ಬಂದಿದ್ದ ಪೊಲೀಸ್ ಪೇದೆಯೊಬ್ಬರು ಕಾರು ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ನಗರದ ಖಾಸಗಿ ಹೋಟೆಲ್ ಮುಂಭಾಗ ಭದ್ರತಾ ಕರ್ತವ್ಯದಲ್ಲಿದ್ದ ಪೇದೆ ಝುಲ್ಫೀಕರ್ ಎಂಬವರು ಬಿ.ಹೆಚ್ ರಸ್ತೆ ದಾಟುವಾಗ ಸಾಗರ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೇದೆಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಖಾಸಗಿ ಹೋಟೆಲ್ ನಲ್ಲಿ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ಗಣ್ಯರು ವಾಸ್ತವ್ಯ ಹೂಡಿದ್ದಾರೆ. ಹಾಗಾಗಿ ವ್ಯಾಪಕ ಭದ್ರತೆ ನೀಡಲಾಗಿದೆ. ಇದೇ ಹೋಟೆಲ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಝುಲ್ಪೀಕರ್ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಅಪಘಾತದ ರಸಭಸಕ್ಕೆ ಕಾರಿನ ಮುಂಭಾಗ ಗಾಜು ಒಡೆದಿದೆ ಎನ್ನಲಾಗಿದೆ.
ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.