ರಾಜ್ಯದಲ್ಲಿ ದಲಿತರಿಗೆ ಇಂದಿಗೂ ದೇವಸ್ಥಾನ, ಹೋಟೆಲ್‍ಗೆ ಪ್ರವೇಶವಿಲ್ಲ: ಡಾ.ಜಿ. ಪರಮೇಶ್ವರ್

Update: 2021-01-03 17:32 GMT

ಬೆಂಗಳೂರು, ಜ.3: ದೇಶ ಹಾಗೂ ರಾಜ್ಯದಲ್ಲಿ ಜಾತಿ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆಯೆಂದರೆ ದಲಿತ ಸಮುದಾಯವನ್ನು ಇಂದಿಗೂ ದೇವಸ್ಥಾನ, ಹೋಟೆಲ್ ಹಾಗೂ ಊರಿನ ಒಳಕ್ಕೆ ಪ್ರವೇಶಕೊಡುವುದಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಸಾವಿತ್ರಿಬಾ ಫುಲೆ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿದ್ದ ಮೀಸಲಾತಿಯ ಕಾರಣಕ್ಕೆ ದಲಿತ ಸಮುದಾಯದಲ್ಲಿ ಶಾಸಕರು, ಸಂಸದರು, ಸಚಿವರಾಗಿದ್ದಾರೆ. ಆದರೂ ದೇಶದಲ್ಲಿ ಅಸ್ಪೃಶ್ಯತೆ ಮಾತ್ರ ನಿವಾರಣೆಯಾಗಿಲ್ಲ. ಇಂತಹ ಆಧುನಿಕ ಕಾಲದಲ್ಲಿಯೂ ದಲಿತರಿಗೆ ಕೇರಿಗಳನ್ನು ನಿರ್ಮಿಸಲಾಗುತ್ತಿದೆ. ರಾಜ್ಯದ ಹಲವು ಕಡೆಗಳಲ್ಲಿ ದಲಿತರಿಗೆ ಕ್ಷೌರಿಕ ಅಂಗಡಿಗಳಿಗೆ ನಿಷೇಧವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರ್‍ಜಾತಿಯ ವಿವಾಹಗಳಿಂದ ಜಾತಿ ಪದ್ಧತಿ ನಿವಾರಣೆಯಾಗುತ್ತದೆಯೆಂದು ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹನೀಯರು ಆಶಿಸಿದ್ದರು. ಆದರೆ, ಇಂದು ದೇಶದಲ್ಲೆಡೆ ಅಂತರ್‍ಜಾತಿ ವಿವಾಹವಾದವರನ್ನು ಕೊಲ್ಲಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಬ್ರಿಟಿಷರೊಂದಿಗೆ ನಡೆಸಿದ ದುಂಡು ಮೇಜಿನ ಸಭೆಯಲ್ಲಿ ದಲಿತರಿಗೆ ಪ್ರತ್ಯೇಕ ಪ್ರಾಂತಕ್ಕೆ ಒತ್ತಾಯಿಸಿದ ಪರಿಣಾಮವಾಗಿ ಮೀಸಲಾತಿಯ ಭಾಗ್ಯವಾದರು ಸಿಕ್ಕಿದೆಯೆಂದು ಅವರು ತಿಳಿಸಿದ್ದಾರೆ.

ಮಾಜಿ ಸಚಿವ ನರೇಂದ್ರ ಸ್ವಾಮಿ ಮಾತನಾಡಿ, ನಗರಗಳಲ್ಲಿ ದಲಿತ ಸಮುದಾಯಕ್ಕೆ ಬಾಡಿಗೆ ಮನೆ ಸಿಗುವುದಿಲ್ಲ. ಹಿಂದುಳಿದ ಸಮುದಾಯದವರೇ ದಲಿತರನ್ನು ಅಸ್ಪೃಶ್ಯತೆ ಯಿಂದ ಕಾಣುತ್ತಾರೆ ಎಂದು ಆಂತಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನೂರಾರು ದಲಿತ ಸಂಘಟನೆಗಳಿವೆ. ಆದರೆ, ಹೆಚ್ಚು ಸಕ್ರೀಯವಾಗಿ ತೊಡಗಿಸಿಕೊಂಡಿಲ್ಲ. ಇದರ ನಡುವೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಸ್ಥಾಪನೆಯಾಗಿದೆ. ಆಳವಾದ ಜ್ಞಾನ, ಅರಿವನ್ನು ಪಡೆಯುವುದರ ಮೂಲಕ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟಬೇಕಾದ ಅಗತ್ಯವಿದೆ ಎಂದು ಅವರು ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಚಲುವರಾಯಸ್ವಾಮಿ ವಹಿಸಿದ್ದರು. ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕ ಝಮೀರ್ ಅಹ್ಮದ್‍ಖಾನ್. ಎಸ್‍ಎಸ್‍ಡಿ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಎಸ್‍ಆರ್‍ಎನ್‍ಇ ಫೌಂಡೇಶನ್‍ನ ಅಧ್ಯಕ್ಷ ನವಲಿ ಹಿರೇಮಠ, ಉಪನ್ಯಾಸಕಿ ಡಾ.ಪ್ರಿಯದರ್ಶಿನಿ, ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್ ಕುಂಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ದಲಿತರನ್ನು ಸ್ಪರ್ಶಿಸದ, ಅಪ್ಪಿಕೊಳ್ಳದ ಮಂದಿ ದೇಶದಲ್ಲಿ ಹಿಂದೂರಾಷ್ಟ್ರ ಸ್ಥಾಪಿಸುತ್ತೇವೆಂದು ಹೇಳುತ್ತಿದ್ದಾರೆ. ಹೀಗೆ ಹಿಂದೂಯೆಂದು ಹೇಳಿಕೊಳ್ಳುವವವರಿಗೆ ನಾಚಿಕೆ ಆಗಬೇಕು. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂವಾಗಿ ಹುಟ್ಟಿದ್ದೇನೆ. ಆದರೆ, ಹಿಂದೂವಾಗಿ ಸಾಯಲಾರೆಯೆಂದು ಘೋಷಿಸಿದರು. ಆ ನಂತರ ಸುಮಾರು 20ವರ್ಷಗಳ ಅಧ್ಯಯನದ ನಂತರ ಬೌದ್ಧಧಮ್ಮವನ್ನು ಸ್ವೀಕರಿಸಿದರು. ಅವರ ಹಾದಿಯಲ್ಲಿ ದಲಿತ ಸಮುದಾಯ ಸಾಗಲಿ.
ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News