ತುಮಕೂರು: 250 ಮಂದಿ ದಲಿತರಿಂದ ಬೌದ್ಧ ಧರ್ಮ ಸ್ವೀಕಾರ

Update: 2021-01-03 17:46 GMT

ತುಮಕೂರು, ಜ.3: ನಗರದ ಹೊರವಲಯದ ಧಮ್ಮಲೋಕ ಬುದ್ದ ವಿಹಾರದಲ್ಲಿ 250ಕ್ಕೂ ಹೆಚ್ಚು ಮಂದಿ ದಲಿತರು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಬೌದ್ಧ ಧಮ್ಮ ಸ್ವೀಕರಿಸಿದ್ದು, ಭಂತೇಜಿಗಳು ಮತ್ತು ಬಿಕ್ಕುಗಳು ಬೌದ್ಧ ಧಮ್ಮದ ಪಂಚಶೀಲ ತತ್ವಗಳನ್ನು ಬೋಧಿಸಿದರು.

ವಿಶ್ವ ಬೌದ್ಧ ಧರ್ಮ ಸಂಘ, ಸಮತ ಸೈನಿಕ ದಳ, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ಹಲವು ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು, ಡಾ. ಸುರೇಂದ್ರ ಅವರು ಬೌದ್ಧ ಭಿಕ್ಷೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮದ ಕುರಿತು ಹೇಳಿರುವ 21 ತತ್ವಗಳನ್ನು ಬೋಧಿಸಲಾಯಿತು.

ಭಂತೇಜಿಗಳು ಮತ್ತು ಬಿಕ್ಕುಗಳು ಧಮ್ಮ ಪದಗಳನ್ನು ಹಾಡಿದರು. ಸಭಿಕರೂ ಕೂಡ ಬಿಕ್ಕುಗಳ ಹಾಡಿಗೆ ದನಿ ಗೂಡಿಸಿದರು. ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಸೇರಿದಂತೆ ಹಲವು ಮುಖಂಡರು ಧಮ್ಮ ಪ್ರಾರ್ಥನೆ ಮಾಡಿದರು.

ಕಾರ್ಯಕ್ರಮಕ್ಕೂ ಮೊದಲು ಗೆದ್ದಲಹಳ್ಳಿಯ ಗೇಟಿನಿಂದ ಧಮ್ಮಲೋಕ ಬುದ್ದ ವಿಹಾರದವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಧಮ್ಮ ದೀಕ್ಷಾ ಸಮಾರಂಭವನ್ನು ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪರಮೇಶ್ವರ್ ಪರಿವರ್ತನೆಗೆ ಕಾಲ ಕೂಡಿ ಬಂದಿದೆ. ಬೌದ್ಧ ಧಮ್ಮದ ದೀಕ್ಷೆ ಪಡೆಯಬೇಕು ಎಂಬ ವಿಶ್ವಾಸ ಬಂದಿರುವುದು ಒಳ್ಳೆಯ ಬೆಳವಣಿಗೆ. ಇಂದು ವಿದ್ಯಾವಂತರು ಹೆಚ್ಚು ಬೌದ್ಧ ಧರ್ಮದ ಕಡೆ ಒಲವು ತೋರುತ್ತಿದ್ದಾರೆ. ಧಮ್ಮವನ್ನು ಸ್ವೀಕರಿಸಿದರಷ್ಟೇ ಸಾಲದು ಅದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡ ಸಿ.ಭಾನುಪ್ರಕಾಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News