ಜನತೆಯು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಂಡರೆ ಅರಾಜಕತೆ ಸೃಷ್ಟಿ: ಸ್ಪೀಕರ್ ಕಾಗೇರಿ

Update: 2021-01-04 14:40 GMT

ಬೆಂಗಳೂರು, ಜ.4: ವಿಧಾನಪರಿಷತ್ತಿನಲ್ಲಿ ಕಳೆದ ಡಿ.15ರಂದು ನಡೆದ ಘಟನಾವಳಿಗಳು ರಾಜ್ಯದ ಜನತೆ ಇಡೀ ದೇಶದ ಎದುರು ತಲೆ ತಗ್ಗಿಸುವಂತಾಯಿತು. ಭವಿಷ್ಯದಲ್ಲಿ ಇಂತಹ ಘಟನೆಗಳು ವಿಧಾನಮಂಡಲದ ಯಾವುದೇ ಸದನದಲ್ಲಿ ನಡೆಯಬಾರದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಪರಿಷತ್ತಿನಲ್ಲಿ ಸಭಾಪತಿ ಪ್ರವೇಶಕ್ಕೆ ಸಿಗದ ಅವಕಾಶ, ಉಪಸಭಾಪತಿಯನ್ನು ಪೀಠದಿಂದ ಕೆಳಗೆ ಎಳೆದು ತಂದದ್ದು, ಸದಸ್ಯರ ನಡುವೆ ಪರಸ್ಪರ ತಳ್ಳಾಟ, ನೂಕಾಟ, ಕೈ ಕೈ ಮಿಲಾಯಿಸಿದ್ದು, ಈ ಎಲ್ಲ ಘಟನೆಗಳಿಂದ ಇಡೀ ದೇಶದಲ್ಲಿ ಅತ್ಯಂತ ಉನ್ನತ ಮಟ್ಟದ ಘನತೆಯನ್ನು ಪಡೆದುಕೊಂಡಿದ್ದ ವಿಧಾನಪರಿಷತ್ತಿನ ಹಿರಿಮೆಗೆ ಧಕ್ಕೆ ಬಂದದ್ದು ಸುಳ್ಳಲ್ಲ ಎಂದರು.

ವಿಧಾನಪರಿಷತ್ತಿನಲ್ಲಿ ನಡೆದ ಘಟನೆಯು ನಮ್ಮನ್ನೆಲ್ಲ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. ವಿಷ ವರ್ತುಲದಲ್ಲಿ ಸಿಲುಕಿರುವ ನಾವು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಶತಮಾನದ ಇತಿಹಾಸ ಹೊಂದಿರುವ ವಿಧಾನಪರಿಷತ್ತಿನ ಅಗತ್ಯವಿದೆಯೇ ಎಂಬುದಷ್ಟರ ಮಟ್ಟಿಗೆ ಇವತ್ತು ಚರ್ಚೆಗಳು ನಡೆಯುವಂತಾಗಿದೆ. ಜನತೆಯು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ ಅರಾಜಕತೆ ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.

ದೇಶದ ಅಗ್ರಗಣ್ಯ ನಾಯಕರು, ಲೋಕಸಭೆಯ ಸ್ಪೀಕರ್ ಸೇರಿದಂತೆ ಹಲವಾರು ಮಂದಿ ವಿಧಾನಪರಿಷತ್ತಿನಲ್ಲಿ ನಡೆದ ಘಟನೆ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ. ವಿಧಾನಮಂಡಲಕ್ಕೆ ಇರುವ ಘನತೆಯನ್ನು ಕಾಪಾಡಿಕೊಂಡು ಮುಂದಕ್ಕೆ ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ಪೀಕರ್ ಹೇಳಿದರು.

ಆತ್ಮಾವಲೋಕನ ಸಭೆಯಲ್ಲಿ ಶಾಸಕರು, ಸಂವಿಧಾನ ತಜ್ಞರು ಸೇರಿದಂತೆ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಪ್ರಮುಖರು ಇರಲಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗುವುದು. ಮುಂಬರುವ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲೆ ಈ ಸಭೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಸರಕಾರ ಅಧಿಕೃತವಾಗಿ ಅಧಿವೇಶನದ ದಿನಾಂಕ ಘೋಷಿಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

ಒಂದು ದೇಶ, ಒಂದು ಚುನಾವಣೆ ಚರ್ಚೆ

ಕಳೆದ ಅಧಿವೇಶನದ ಸಂದರ್ಭದಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಅಧಿವೇಶನದ ಅವಧಿ ಮೊಟಕುಗೊಂಡ ಹಿನ್ನೆಲೆಯಲ್ಲಿ ಈ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ. ಮುಂದಿನ ಅಧಿವೇಶನದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲು ಸದನ ಕಲಾಪ ಸಲಹಾ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News