ಕ್ಷೇತ್ರಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ: ಬಿಜೆಪಿ ಶಾಸಕರ ಸಬೆಯಲ್ಲಿ ಯಡಿಯೂರಪ್ಪ ಭರವಸೆ
ಬೆಂಗಳೂರು, ಜ. 4: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ಅನುದಾನ ನೀಡಲು ಸಾಧ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಶಾಸಕರಿಗೆ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ವಿಭಾಗವಾರು ಶಾಸಕರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಕ್ಷೇತ್ರಗಳ ಅಭಿವೃದ್ಧಿ, ಅನುದಾನ ಕೊರತೆ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ, ಅಧಿಕಾರಿಗಳ ಸ್ಪಂದನೆ, ಪಕ್ಷ ಸಂಘಟನೆ ಸೇರಿ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆಂದು ಗೊತ್ತಾಗಿದೆ
ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದ ಶಾಸಕರ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಈ ವೇಳೆ ಬಹುತೇಕ ಶಾಸಕರು ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಕೊರತೆ, ಉಸ್ತುವಾರಿ ಸಚಿವರ ಕಾರ್ಯವೈಖರಿಗೆ ಅಸಮಾಧಾನ, ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳ ನಿರ್ಲಕ್ಷತೆ ಸಹಿತ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿನ ವೈಫಲ್ಯಗಳನ್ನು ಶಾಸಕರು, ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದಾರೆಂದು ಗೊತ್ತಾಗಿದೆ.
ಹೊಂದಾಣಿಕೆಗೆ ಆಕ್ಷೇಪ: ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಕೆಡಿಪಿ ಸಭೆಗಳಿಗೆ ಶಾಸಕರಿಗೆ ಮಾಹಿತಿಯನ್ನೇ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ. ಅಲ್ಲದೆ, ನಮ್ಮ ಸಮಸ್ಯೆಗಳಿಗೆ ಸಚಿವರುಗಳು ಸ್ಪಂದಿಸುವುದಿಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.
ಕೆಲ ಸಚಿವರು ಬಿಜೆಪಿಯ ಶಾಸಕರನ್ನೇ ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೆ. ಲೋಕಸಭೆಯಿಂದ ಗ್ರಾಮ ಪಂಚಾಯತ್ ವರೆಗೆ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಹಾಗೂ ಪಕ್ಷ ಸಂಘಟನೆಗೆ ಶ್ರಮಿಸುತ್ತೇವೆ. ಆದರೆ, ನಮಗೆ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಉಸ್ತುವಾರಿ ಸಚಿವರು ಸ್ಪಂದಿಸುವುದಿಲ್ಲ. ಬದಲಿಗೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಕೆಲಸಗಳನ್ನು ಮಾಡಿಕೊಡುವ ಮೂಲಕ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಶಾಸಕರು, ಲೋಕೋಪಯೋಗಿ, ಕಂದಾಯ, ಜಲಸಂಪನ್ಮೂಲ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ನಮ್ಮ ಕೆಲಸ-ಕಾರ್ಯಗಳು ಇರುತ್ತವೆ. ಎಲ್ಲ ಕೆಲಸಕ್ಕೂ ಮುಖ್ಯಮಂತ್ರಿಯನ್ನೇ ಭೇಟಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಸಮಸ್ಯೆಗಳಿಗೆ ಉಸ್ತುವಾರಿ ಸಚಿವರು ಸ್ಪಂದಿಸುವಂತೆ ಸೂಚನೆ ಕೊಡಿ ಎಂದು ಕೋರಿದ್ದಾರೆಂದು ಹೇಳಲಾಗಿದೆ.
ಅಭಿವೃದ್ಧಿಗೆ ಆದ್ಯತೆ: ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಮರ್ಪಕ ರೀತಿಯಲ್ಲಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದ ಯಡಿಯೂರಪ್ಪ, ಉಸ್ತುವಾರಿ ಸಚಿವರಿಗೆ, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಲು ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಬಜೆಟ್‍ನಲ್ಲಿ ಘೋಷಿತ ಯೋಜನೆಗಳ ಅನುಷ್ಠಾನ ಹಾಗೂ ಮುಂದಿನ ಬಜೆಟ್‍ನಲ್ಲಿ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಕೊಡಿ. ಏನೇ ಸಮಸ್ಯೆಗಳಿದ್ದರೂ ನನ್ನನ್ನು ಖುದ್ದು ಭೇಟಿ ಮಾಡಿ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೂ ಅನುದಾನ ಒದಗಿಸುತ್ತೇನೆ ಎಂದು ಯಡಿಯೂರಪ್ಪ, ಶಾಸಕರಿಗೆ ಅಭಯ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
'ರಾಜ್ಯದಲ್ಲಿ ನಮ್ಮ ಪಕ್ಷದ ಸರಕಾರವೇ ಆಡಳಿತ ನಡೆಸುತ್ತಿದ್ದರೂ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನಕ್ಕಾಗಿ ಶಾಸಕರು ಬೇಡುವ ಸ್ಥಿತಿ ಇದೆ. ಹೀಗಾಗಿ ವಿಪಕ್ಷಗಳು ನಮ್ಮನ್ನು ನೋಡಿ ಹಾಸ್ಯ ಮಾಡುವಂತಾಗಿದೆ. ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗುತ್ತಿದ್ದು, ಇದನ್ನು ಸರಿಪಡಿಸಬೇಕಿದೆ'
-ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ನಗರ ಕ್ಷೇತ್ರದ ಶಾಸಕ