ಉಜಿರೆಯಲ್ಲಿ ಪಾಕ್ ಪರ ಘೋಷಣೆ ಆರೋಪ: ನೈಜ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್‍ಡಿಪಿಐ ಧರಣಿ

Update: 2021-01-04 16:34 GMT

ಮಡಿಕೇರಿ, ಜ. 4: ಉಜಿರೆಯಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಕಾರಣ ಹೇಳಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತ್ತದ ಬಳಿ ಜಮಾಯಿಸಿದ ಎಸ್‍ಡಿಪಿಐ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮನ್ಸೂರ್ ಆಲಿ ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣಾ ಫಲಿತಾಂಶದ ವಿಜಯೋತ್ಸವ ಸಂದರ್ಭ ನಮ್ಮ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.

ಗ್ರಾ.ಪಂ. ಚುನಾವಣೆಯಲ್ಲಿ ಎಸ್‍ಡಿಪಿಐ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಸರ್ಕಾರ ಇದನ್ನು ಸಹಿಸಲಾಗದೆ ಈ ರೀತಿ ಮಾಡಿದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ನೈಜ ಆರೋಪಿಗಳನ್ನು ಬಂಧಿಸಿ ಅಮಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.  

ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಕಾರ್ಯದರ್ಶಿ ಜಂಶೀರ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಬಶೀರ್, ಮಡಿಕೇರಿ ನಗರಾಧ್ಯಕ್ಷ ಕಲೀಲ್, ಉಪಾಧ್ಯಕ್ಷ ಮೈಕಲ್ ವೇಗಸ್ ಹಾಗೂ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News