6 ಗ್ರಾಮಗಳು, 10 ಶಾಲೆಗಳನ್ನು ದತ್ತು ಪಡೆದ ಮೈಸೂರು ವಿವಿ

Update: 2021-01-04 17:54 GMT

ಮೈಸೂರು,ಜ.4: ಮೈಸೂರು ವಿಶ್ವವಿದ್ಯಾನಿಲಯವು ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಹನೂರು ತಾಲೂಕು ವ್ಯಾಪ್ತಿಯ ಆರು ಗ್ರಾಮಗಳು ಹಾಗೂ ಹತ್ತು ಶಾಲೆಗಳನ್ನು ದತ್ತು ಪಡೆದುಕೊಂಡಿದೆ ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ವಿವಿಯ ಕ್ರಾಫರ್ಡ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವಿಶ್ವವಿದ್ಯಾನಿಲಯವು ಈಗಾಗಲೇ ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ, ಯೋಜನೆಯ ವರದಿಯನ್ನು ತಯಾರಿಸಲು ಹನೂರು ತಾಲೂಕು ವ್ಯಾಪ್ತಿಗೆ ಬರುವ ಆರು ಗ್ರಾಮ ಪಂಚಾಯತ್ ಗಳ ತಲಾ ಒಂದೊಂದು ಗ್ರಾಮಗಳನ್ನು ದತ್ತು ಪಡೆದುಕೊಂಡಿದೆ ಎಂದರು.

ದತ್ತು ಪಡೆದಿರುವ ಗ್ರಾಮಗಳು: ಲೊಕ್ಕನಹಳ್ಳಿ ಗ್ರಾಮಪಂಚಾಯತ್ ನ ಸೇಬಿನ ಕೋಟೆ, ಪಿ.ಜಿ.ಪಾಳ್ಯ ಗ್ರಾಪಂನಲ್ಲಿ ಹುಯಿಲ್ನತ್ತ, ಎಂ.ಎಂ.ಹಿಲ್ಸ್ ಗ್ರಾಪಂನಲ್ಲಿ ಒಡಕೆಹಳ್ಳ, ಪೊನ್ನಾಚಿ ಗ್ರಾಪಂನಲ್ಲಿ ರಾಮೇಗೌಡನ ಹಳ್ಳಿ, ಮಿಣ್ಯಂ ಗ್ರಾಪಂನಲ್ಲಿ ಸೂಳೆಕೋಬೆ, ಹುತ್ತೂರು ಗ್ರಾಪಂನಲ್ಲಿ ಗುಳ್ಳದ ಬಯಲು ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಯು ಶತಮಾನೋತ್ಸವ ಆಚರಿಸಿಕೊಂಡಿದ್ದು, ವಿವಿ ವ್ಯಾಪ್ತಿಯಲ್ಲಿ ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರತಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿ ಕ್ರಿಯಾ ಯೋಜನೆಯಡಿ 10 ಶಾಲೆಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ದತ್ತು ಪಡೆದ ಶಾಲೆಗಳ ವಿವರ: ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶತಮಾನ ಕಂಡ ಶಾಲೆ), ಯಳಂದೂರು ತಾಲೂಕಿನ ಕೊಮಾರನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶತಮಾನ ಕಂಡ ಶಾಲೆ), ಹನೂರು ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತೂಬಿನ ಕೆರೆಯ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಸನ ಹೇಮಗಂತೋತ್ರಿ ಸ್ನಾತಕೋತ್ತರ ಕೇಂದ್ರದ ಹೊಳೆನರಸೀಪುರ ತಾಲೂಕಿನ ಯಲ್ಲೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಸೂರು ವಿಶ್ವವಿದ್ಯಾನಿಲಯದ ಮೈಸೂರು ತಾಲೂಕಿನ ಮಾರ್ಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಗ್ರಾಲ್ ಛತ್ರದ ಸರ್ಕಾರಿ ಪ್ರೌಢಶಾಲೆ, ಕೆ.ಆರ್.ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳಲಾಗಿದೆ.

ವಿಶ್ವವಿದ್ಯಾನಿಲಯವು ದತ್ತು ಪಡೆದಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅವುಗಳ ಜೀರ್ಣೋದ್ಧಾರಕ್ಕಾಗಿ ಒಂದು ಸಮಿತಿಯನ್ನು ರಚಿಸಿದ್ದು, ಅದರಂತೆ ಸಮಿತಿಯು ಅಧ್ಯಕ್ಷರನ್ನೊಳಗೊಂಡ ಎಲ್ಲಾ ಸದಸ್ಯರಗಳು ಶಾಲೆಗಳಿಗೆ ಖುದ್ದು ಭೇಟಿ ನೀಡಿ, ಶಾಲೆಗಳಲ್ಲಿರುವಂತಹ ನ್ಯೂನತೆಗಳನ್ನು ಗುರುತಿಸಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣಾ ಸಲಹಗಾರರಾದ ಡಾ.ಎಂ.ಆರ್.ದೊರೆಸ್ವಾಮಿ ಇವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ದತ್ತು ಪಡೆದಿರುವ ಶಾಲೆಗಳ ಬಗ್ಗೆ ಚರ್ಚಿಸಲಾಯಿತು.

ವಿದ್ಯಾರ್ಥಿಗಳಿಗೆ ಶೌಚಾಲಯವನ್ನು ನಿರ್ಮಿಸಿ ಕೊಡುವುದು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು, ಶಾಲೆಗಳ ಪುನರುಜ್ಜೀವನ ಮಾಡುವುದು, ಶತಮಾನ ಕಂಡ ಶಾಲೆಗಳನ್ನು ಗುರುತಿಸಿ ಗೌರವಿಸುವುದು, ಸಮಗ್ರ ಇತಿಹಾಸದ ದಾಖಲೀಕರಣ ಮಾಡುವುದು, ಮಾದರಿ ಶಾಲೆಯಾಗಿ ರೂಪಿಸುವುದು, ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು, ಸಮುದಾಯದ  ಸಹಭಾಗಿತ್ವದಿಂದ ಶಾಲೆಗೆ ಸಂಪನ್ಮೂಲಗಳ ಕ್ರೋಢಿಕರಣ ಮಾಡುವುದು, ಹಳೆಯ ವಿದ್ಯಾರ್ಥಿಗಳ ಸಂಘ ರಚಿಸಿ ಶೈಕ್ಷಣಕಿ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಎಲ್ಲಾ ಭಾಗೀದಾರರ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು, ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು, ಶತಮಾನ ಕಂಡ ಶಾಲೆಗಳ ಕಟ್ಟಡಗಳ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮಾಡುವುದು ವಿವಿಯ ಆಶಯ ಹಾಗೂ ಉದ್ದೇಶವಾಗಿದೆ ಎಂದು ಹೇಳಿದರು.

ಶೇ.50ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ: ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಹಯೋಗದಲ್ಲಿ ಜ.6ರಂದು “ಕೃತಿಗಳ ಲೋಕಾರ್ಪಣೆ” ಹಾಗೂ ಶೇ.50 ರಿಯಾಯಿತಿ ದರದಲ್ಲಿ ಎರಡು ದಿನಗಳ “ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ” ವನ್ನು ಆಯೋಜಿಸಲಾಗಿದೆ.

ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಸಂಸ್ಥೆಗಳ ಪ್ರಕಟಣಾ ಕಾರ್ಯದ ಮಹತ್ವ ಮತ್ತು ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಜ.6 ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯ ಆವರಣದಲ್ಲಿ ಈ ಮೇಳ ಉದ್ಘಾಟನೆಯಾಗಲಿದೆ ಎಂದರು.

ಪುಸ್ತಕ ಮೇಳದ ಉದ್ಘಾಟನಾ ಕಾರ್ಯಕ್ರಮದಂದು ಡಾ.ಎಸ್.ಶಿವರಾಜಪ್ಪ ಅವರ 'ಕವಿಜನ ಕಾಮಧೇನು ಮುಮ್ಮಡಿ ಕೃಷ್ಣರಾಜ ಒಡೆಯರ್', ಡಾ.ಸಿ.ಪಾರ್ವತಿ ಅವರ 'ಸಿದ್ಧಸಿದ್ಧಾಂತ ಪದ್ಧತಿ', ಡಾ,ಎಂ.ಗೀತಾ ಅವರ 'ಅಶ್ವಲಕ್ಷಣಮ್', ಜಿ.ಎನ್.ಸಿದ್ದಲಿಂಗಪ್ಪ ಅವರ 'ಪ್ರೊ.ಎಚ್.ದೇವಿರಪ್ಪ ಬದುಕು ಮತ್ತು ಬರಹ', ಎಸ್.ಸಿ.ಶೋಭಾ ಅವರ 'ಶ್ರೀಚಾಮುಂಡಿಕಾ ಲಘುನಿಘಂಟು', ಡಾ.ದಿದ್ದಿಗಿ ವಂಶಿ ಕೃಷ್ಣ ಅವರ 'ಸೂರ್ಯಚಂದ್ರವಂಶಾನುಚರಿತಮ್' ಒಟ್ಟು ಐದು ಕೃತಿಗಳ ಲೋಕಾರ್ಪಣೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪುಸ್ತಕ ಮೇಳದಲ್ಲಿ ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ಪ್ರಕಟಿಸಿರುವ ಬಹುತೇಕ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಓದುಗರಿಗೆ ದೊರೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News