ಶಾಸಕರ ಜೊತೆ ಬಿಎಸ್‌ವೈ ಸಭೆಯಲ್ಲಿ ಒಗ್ಗಟ್ಟಿನ ಮಂತ್ರ: ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡದಿರಲು ಸೂಚನೆ

Update: 2021-01-05 16:32 GMT

ಬೆಂಗಳೂರು, ಜ. 5: ಮುಂಬರುವ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಆದ್ಯತೆ, ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿಯೂ ಬಹಿರಂಗ ಹೇಳಿಕೆ ನೀಡದೆ ಎಲ್ಲ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂಬ ಸಂದೇಶ ರವಾನಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳಲ್ಲಿ ನಡೆಸಿದ ಶಾಸಕರ ಸಭೆ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ.

ಮಂಗಳವಾರ ಎರಡು ದಿನಗಳಿಂದ ನಡೆದ ವಿಭಾಗವಾರು ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್, ಎಲ್ಲ ಶಾಸಕರು ಸಿಎಂ ಬಿಎಸ್‍ವೈ ಅವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಒಬ್ಬರಿಂದ ಗೊಂದಲ: ವಿಭಾಗವಾರು ಶಾಸಕರ ಸಭೆಯಲ್ಲಿ ನಿನ್ನೆ ಒಬ್ಬರಿಂದ ಸ್ವಲ್ಪ ಗೊಂದಲ ಆಯಿತು. ಉಳಿದಂತೆ ಎಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಅಚಲ ನಿಷ್ಠೆ- ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಉಲ್ಲೇಖಿಸದೆ, ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದರು.

ಪಕ್ಷದ ಒಟ್ಟು 118 ಮಂದಿ ಶಾಸಕರು ಮುಖ್ಯಮಂತ್ರಿ ಉತ್ತಮ ಕೆಲಸ ಮಾಡುತ್ತಿದ್ದಾರೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊರೋನ ಸೋಂಕಿನ ಸಂಕಷ್ಟದಲ್ಲಿಯೂ ಆರ್ಥಿಕ ಸಂದಿಗ್ಧ ಸ್ಥಿತಿಯಲ್ಲಿಯೂ ಸೋಂಕು ನಿಯಂತ್ರಣ ಹಾಗೂ ನೆರೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಕಾರಜೋಳ ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಷೇತ್ರಗಳಿಗೆ ಅನುದಾನ: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಆದರೂ ಅಭಿವೃದ್ಧಿ ಕಾರ್ಯಕ್ಕೆ ಕ್ಷೇತ್ರಗಳಿಗೆ ತೊಂದರೆಯಾಗದಂತೆ ಸಿಎಂ ಅನುದಾನ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಹದಗೆಟ್ಟ ರಸ್ತೆ, ಸೇತುವೆಗಳ ಅಭಿವೃದ್ಧಿಗೆ ತಲಾ 25 ಕೋಟಿ ರೂ.ಅನುದಾನ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಹಣಕಾಸಿನ ಇತಿಮಿತಿಯಲ್ಲಿ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆಂದು ಕಾರಜೋಳ ತಿಳಿಸಿದರು.

ಒಗ್ಗಟ್ಟಿನ ಮಂತ್ರ: 2023ಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಏನೇನು ಕಾರ್ಯಸೂಚಿ ರೂಪಿಸಬೇಕು ಎಂಬ ಬಗ್ಗೆ ಶಾಸಕರು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಪಕ್ಷದ ಆಂತರಿಕ ವಿಚಾರಗಳನ್ನು ಯಾವುದೇ ಕಾರಣಕ್ಕೂ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದ ಅವರು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ಅಭಿನಂದನೆ: ಜ.11, 12, 13 ಮೂರುದಿನ ರಾಜ್ಯದಲ್ಲಿ ಐದು ತಂಡಗಳಾಗಿ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗುವಂತೆ ಸೂಚಿಸಲಾಗುವುದು ಎಂದರು.

ಅಮಿತ್ ಶಾ ರಾಜ್ಯಕ್ಕೆ: ಜ. 16 ಮತ್ತು 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬರಲಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಎರಡು ದಿನಗಳ ಕಾಲ ಶಾಸಕರೆಲ್ಲರೂ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಎಂದರು.

'ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ, ಶಾಸಕರ ಕೆಲಸ-ಕಾರ್ಯಗಳಿಗೆ ಉಸ್ತುವಾರಿ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸುವುದು, ಆಡಳಿತದಲ್ಲಿ ಹೊರಗಿನ ವ್ಯಕ್ತಿಗಳ ಹಸ್ತಕ್ಷೇಪ ತಪ್ಪಿಸುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕೆಂಬುದು ಸೇರಿದಂತೆ ಸರಕಾರದಲ್ಲಿನ ಲೋಪಗಳನ್ನು ಶಾಸಕರು, ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ' ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News