ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿ ಶಾಸಕ ಬೆಳ್ಳಿ ಪ್ರಕಾಶ್ ಅವಿರೋಧ ಆಯ್ಕೆ
ಬೆಂಗಳೂರು, ಜ. 5: ರಾಜ್ಯ ಅಪೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಉಪಾಧ್ಯಕ್ಷರಾಗಿ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬೆಳ್ಳಿ ಪ್ರಕಾಶ್, ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ಗೌಡ ಅವರು ಮಾತ್ರವೇ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವರನ್ನು ಚುನಾವಣಾಧಿಕಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದ್ದಾರೆ.
ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿದ್ದರು. ಜೊತೆಗೆ ಬಳ್ಳಾರಿಯ ಚಂದ್ರಶೇಖರ್ ಅವರು ಈ ಹಿಂದೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಆ ಸ್ಥಾನಗಳಿಗೆ ಕ್ರಮವಾಗಿ ಬೆಳ್ಳಿ ಪ್ರಕಾಶ್ ಮತ್ತು ಹರೀಶ್ ಗೌಡ ಆಯ್ಕೆಯಾಗಿದ್ದಾರೆ.