ಲಾರಿಗಳಿಂದ ಡಿಸೇಲ್ ಕಳ್ಳತನ: ಆರೋಪಿ ಯುವಕನನ್ನು ಬಂಧಿಸಿದ ತುಂಗಾನಗರ ಪೊಲೀಸರು
ಶಿವಮೊಗ್ಗ, ಜ.06: ಲಾರಿಗಳಿಂದ ಡಿಸೇಲ್ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಸಿಸಿಟಿವಿ ಕ್ಯಾಮರಾಗಳ ಸಹಾಯದಿಂದ ತುಂಗಾ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಲ್ಮಾನ್ ಬಂಧಿತ ಆರೋಪಿ. ಈತ ಮೂಲತಃ ಮಹಾರಾಷ್ಟ್ರದವನು ಎನ್ನಲಾಗಿದೆ. ಶಿವಮೊಗ್ಗ ನಗರದ ಊರುಗಡೂರು ವೃತ್ತದ ಬಳಿ ಶಂಕರ್ ಎಂಬವರಿಗೆ ಸೇರಿದ ಲಾರಿಯಿಂದ ಡಿಸೇಲ್ ಕಳವು ಮಾಡುತ್ತಿದ್ದಾಗ ಸಲ್ಮಾನ್‌ನನ್ನು ಬಂಧಿಸಲಾಗಿದೆ.
ನಿಂತಿದ್ದ ಲಾರಿಯಲ್ಲಿ ಡಿಸೇಲ್ ಕಳ್ಳತನವಾಗಿರುವ ಬಗ್ಗೆ ಶಂಕರ್ ಎಂಬವರು ಮಂಗಳವಾರ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಲಾರಿಯಿಂದ ಡಿಸೇಲ್ ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾದ ಸಹಾಯದಿಂದ ಮಿಂಚಿನ ಕಾರ್ಯಾಚರಣೆ ನಡೆಸಿದ ತುಂಗಾ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈತನಿಂದ 11,970 ರೂ. ಮೌಲ್ಯದ 150 ಲೀಟರ್ ಡಿಸೇಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ತನ್ನ ಹೆಂಡತಿ ಮಕ್ಕಳೊಂದಿಗೆ ಈತ ಚಿಕ್ಕಲ್‌ನಲ್ಲಿ ವಾಸವಾಗಿದ್ದ. ಈತ ಲಾರಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ತುಂಗಾನಗರ ಠಾಣೆ ಪಿಎಸ್‌ಐ ತಿರುಮಲೇಶ್, ಹೆಚ್.ಸಿ ಸಯ್ಯದ್ ಇಮ್ರಾನ್, ಪಿಸಿ ರಾಜು ಇದ್ದರು.