ಮದುವೆಯಾಗದ ಆದಿತ್ಯನಾಥ್‍ಗೆ ಪ್ರೀತಿ ಬಗ್ಗೆ ಏನು ಗೊತ್ತು ?: ಯುಪಿ ಸಿಎಂ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ

Update: 2021-01-06 15:34 GMT

ಬೆಂಗಳೂರು, ಜ. 6: ಕಾಂಗ್ರೆಸ್ ಪಕ್ಷದ ಸಕ್ರಿಯ ಚಟುವಟಿಕೆಗಳಿಂದ ದೂರ ಉಳಿದಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ, ರಾಜ್ಯದ ಜನರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನು ಜೆಡಿಎಸ್ ಸೇರ್ಪಡೆಯಾಗುವ ತೀರ್ಮಾನ ಮಾಡಿದ್ದೇನೆ ಎಂದು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಇಲ್ಲಿನ ಶಾಸಕರ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜನತಾ ಪರಿವಾರ ಒಗ್ಗೂಡಬೇಕು. ಹೀಗಾಗಿ ಶೀಘ್ರದಲ್ಲೆ ನಾನು ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್, ಶರದ್ ಯಾದವ್ ಅವರ ಜತೆಯೂ ಸಮಾಲೋಚನೆ ನಡೆಸುವೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆಂದು ಯಾರಾದರೂ ಅಂದುಕೊಂಡಿದ್ದರಾ? ಎಂದು ಪ್ರಶ್ನಿಸಿದ ಇಬ್ರಾಹಿಂ, ದೇವರ ಅನುಗ್ರಹದಿಂದ ನಾನು ಮಾಡಿದ್ದೆಲ್ಲ ಒಳ್ಳೆಯದೇ ಆಗಿದೆ. ಹೀಗಾಗಿ ಜನತಾ ಪರಿವಾರವನ್ನು ಒಗ್ಗೂಡಿಸುವ ಕೆಲಸದಲ್ಲೂ ಒಳ್ಳೆಯದೇ ಆಗಲಿದೆ ಎಂದು ತಿಳಿಸಿದರು.

ದೇಶ ಮತ್ತು ರಾಜ್ಯಕ್ಕೆ ಒಳ್ಳೆಯದಾಗಬೇಕು, ಎಲ್ಲರಿಗೂ ಒಳಿತಾಗಬೇಕು ಎಂಬ ಕಾರಣದಿಂದ ಜೆಡಿಎಸ್ ಸೇರುವ ತೀರ್ಮಾನ ಮಾಡಿದ್ದೇನೆ. ಅಲ್ಲಿಗೆ ಹೋಗಿ ನನಗೇನು ಆಗಬೇಕೆಂದು ಇಲ್ಲ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿಯವರ ಟೆಂಟ್‍ಗೂ ಬೆಂಕಿ ಬಿದ್ದಿದೆ. ಎಂದೋ ಒಂದು ದಿನ ಒಂದೊಂದು ಕಡೆ ಓಡಿ ಹೋಗುತ್ತಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ಮಾತ್ರವೇ ಅಪ್ಪ, ಮಕ್ಕಳ ಪಕ್ಷ ಅಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ, ಮಕ್ಕಳು ಇಲ್ಲವೇ?, ಆರ್.ಜೆ.ಡಿಯಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ ಇಬ್ರಾಹಿಂ, ದೇಶದಲ್ಲಿ ರೈತ ಸಮೂಹ ಚಳಿ, ಗಾಳಿ ಲೆಕ್ಕಿಸದೆ ಬೀದಿಯಲ್ಲಿ ಕುಳಿತಿದೆ. ರಾಜ್ಯಕ್ಕೂ ಅದೇ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

ಸರಕಾರಕ್ಕೇನು ಸಮಸ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಲವ್ ಬಗ್ಗೆ ಏನು ಗೊತ್ತು? ಆತ ಮದುವೆನೇ ಆಗಿಲ್ಲ? ಅವರಿಗೆ ಹೆಂಡತಿ ಮಕ್ಕಳು ಎಂದರೆ ಏನು ಅಂತ ಗೊತ್ತಾ? ಎಂದು ಪ್ರಶ್ನಿಸಿದ ಇಬ್ರಾಹಿಂ, ಹುಡುಗ-ಹುಡುಗಿ ಪ್ರೀತಿ ಮಾಡಿದರೆ ಸರಕಾರಕ್ಕೇನು ಸಮಸ್ಯೆ ಎಂದು ಟೀಕಿಸಿದರು.

ಗಂಡು ಕರು ಯಾರು ಸಾಕ್ತಾರೆ?: ಮುಖ್ಯಮಂತ್ರಿ ಯಡಿಯೂರಪ್ಪ ಕೇಶವ ಕೃಪಾದವರನ್ನು ಮೆಚ್ಚಿಸಲು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಆದರೆ, ರಾಜ್ಯದಲ್ಲಿ ಗೋಮಾಳವೇ ಇಲ್ಲ. ಗೋವು ಸತ್ತರೆ ಎಲ್ಲಿ ಹೂಳಬೇಕು. ಹಸು ಗಂಡು ಕರು ಹಾಕಿದರೆ ಅದನ್ನು ಸಾಕುವವರು ಯಾರು ಎಂದು ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News