ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡಲು ಚಿಂತನೆ: ಸಚಿವ ಶ್ರೀಮಂತ ಪಾಟೀಲ್

Update: 2021-01-06 17:31 GMT

ಬೆಂಗಳೂರು, ಜ. 6: ರಾಜ್ಯದ ‘ಮದ್ರಸಾ'ಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜತೆಗೆ ಆಧುನಿಕ ಶಿಕ್ಷಣವನ್ನು ನೀಡುವ ಮೂಲಕ ಎಸೆಸೆಲ್ಸಿಗೆ ತತ್ಸಮಾನ ಎಂದು ಪರಿಗಣಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಇಲಾಖೆ ಅಭಿವೃದ್ಧಿಗೆ ಸಂಬಂಧಿಸಿದ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಮದ್ರಸಾಗಳಲ್ಲಿ ಮಕ್ಕಳಿಗೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತದ ಪಠ್ಯವನ್ನು ಬೋಧಿಸಲಾಗುವುದು. ಅಲ್ಲಿ ಕಲಿತು ಹೊರಬರುವಾಗ ಐಟಿಐನಂತಹ ಕೌಶಲ ಆಧರಿತ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿರುವ ಮುಸ್ಲಿಮ್ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಜತೆಗೆ ಉದ್ಯೋಗ ಆಧಾರಿತ ಶಿಕ್ಷಣ ನೀಡಬೇಕು ಎಂದ ಶ್ರೀಮಂತ ಪಾಟೀಲ್, ರಾಜ್ಯದಲ್ಲಿ 800ಕ್ಕೂ ಹೆಚ್ಚು ಮದ್ರಸಾಗಳಿದ್ದು, ಅವುಗಳಲ್ಲಿ ಆಧುನಿಕ ಶಿಕ್ಷಣ ಜಾರಿಗೊಳಿಸಬೇಕೆಂಬ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಶಾದಿಭಾಗ್ಯ ಯೋಜನೆಗೆ ತಡೆ: ಕೋವಿಡ್-19 ಸೋಂಕಿನ ಕಾರಣ ಹಾಗೂ ಆರ್ಥಿಕ ಕೊರತೆ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಂತೆಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೂ ಅನುದಾನ ಕಡಿತ ಮಾಡಲಾಗಿದೆ. ಹೀಗಾಗಿ ಕೆಲ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಅದೇ ರೀತಿಯಲ್ಲಿ ಶಾದಿಭಾಗ್ಯ ಯೋಜನೆಗೆ ತಡೆ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಾಯ್ದೆ ಜಾರಿ ನಿಶ್ಚಿತ: ರಾಜ್ಯದಲ್ಲಿ ಲವ್ ಜಿಹಾದ್ ನಿಷೇಧಿಸಿ ಕಾಯ್ದೆಯನ್ನು ಜಾರಿಗೆ ತರುವುದು ನಿಶ್ಚಿತ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಈ ಮಸೂದೆ ಕಾನೂನು ಇಲಾಖೆ ಪರಿಶೀಲನೆಯಲ್ಲಿದೆ. ಈ ಕುರಿತು ಅಧ್ಯಯನ ನಡೆಸಿ ಸಮುದಾಯದ ಮುಖಂಡರೊಂದಿಗೆ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಿ ಕಾಯ್ದೆ ಜಾರಿಗೆ ತರಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News