×
Ad

ಸಾರ್ವಜನಿಕವಾಗಿ ಯುವಕನಿಗೆ ಕಾಲಿನಿಂದ ಒದ್ದು, ಲಾಠಿಯಿಂದ ಥಳಿಸಿದ ಪೊಲೀಸರು: ವಿಡಿಯೋ ವೈರಲ್

Update: 2021-01-06 21:56 IST

ಮೈಸೂರು,ಜ.6: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಪೊಲೀಸರು ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಲಾಠಿಯಿಂದ ಥಳಿಸಿರುವ ಘಟನೆ ಇತ್ತೀಚಿಗೆ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಟಿ. ದೊಡ್ಡಪುರ ಗ್ರಾಮದ ಯವಕ ಚೇತನ್ ಮೇಲೆ ತಿ.ನರಸೀಪುರ ಪೊಲೀಸ್ ಪೇದೆ ಹಾಗೂ ಹೋಂ ಗಾರ್ಡ್‍ಗಳು ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಲಾಠಿಯಲ್ಲಿ ಹೊಡೆರುವ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಡಿ.30 ರಂದು ತನ್ನ ಚಿಕ್ಕಮ್ಮನಿಗೆ ಹುಷಾರಿಲ್ಲ ಎಂದು ಬೈಕ್ ನಲ್ಲಿ ಮೂವರು ಚಾಲನೆ ಮಾಡಿಕೊಂಡು ಬಂದಿದ್ದಾರೆ. ಗ್ರಾ.ಪಂ.ಚುನಾವಣೆ ನಿಮಿತ್ತ ಎಲ್ಲಾ ಸರ್ಕಲ್ ಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಮೂವರು ಕುಳಿತುಕೊಂಡು ಬರುತ್ತಿದ್ದ ಬೈಕ್ ಅನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಚೇತನ್ ನಮ್ಮ ಚಿಕ್ಕಮ್ಮನಿಗೆ ಹುಷಾರಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಬೇಡಿದರೂ ಪೊಲೀಸರು ಬೈಕ್ ಬೀಗ ಕಿತ್ತುಕೊಳ್ಳುವ ಮೂಲಕ ದರ್ಪ ತೋರಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಡಾ.ಆಲಗೂಡು ಚಂದ್ರಶೇಖರ್ ಆರೋಪಿಸಿದರು.

ಮಾನವೀಯತೆ ತೋರದ ಪೊಲೀಸರು, ಆತ ಇವರಿಗೆ ತಿರುಗಿ ಮಾತನಾಡಿದ ಎಂಬ ಒಂದೇ ಕಾರಣ ಇಟ್ಟುಕೊಂಡು, ಆತನನ್ನು ಸಾರ್ವಜನಿಕವಾಗಿ ಅಟ್ಟಾಡಿಸಿಕೊಂಡು ಕಾಲಿನಿಂದ ಒದ್ದು, ಲಾಠಿಯಲ್ಲಿ ಥಳಿಸಿದ್ದಾರೆ. ಇದರಿಂದ ಅವಮಾನಿತನಾದ ಚೇತನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಚೇತನ್ ನನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದೇವೆ ಎಂದು ತಿಳಿಸಿದರು.

ಯವಕ ಚೇತನ್ ಏನೇ ತಪ್ಪು ಮಾಡಿರಲಿ ಸಾರ್ವಜನಿಕವಾಗಿ ಆತನ ಮೇಲೆ ಪೊಲೀಸರು ಹಲ್ಲೆ ಮಾಡುವುದು ಎಷ್ಟು ಸರಿ? ಈ ಘಟನೆ ಸಂಬಂಧ ರಾಜೀ ಪಂಚಾಯಿತಿ ಮಾಡಲು ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಅವಮಾನಕ್ಕೀಡಾದ ಯುವಕನಿಗೆ ನ್ಯಾಯ ಸಿಗುವುದೇ ಎಂದು ಪ್ರಶ್ನಿಸಿದರು. ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಘಟನೆ ಸಂಬಂಧ ಯಾರೇ ತಪ್ಪಿತಸ್ಥರಾದರೂ ಸರಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಇದೊಂದು ಅತ್ಯಂತ ಅಮಾನವೀಯ ಘಟನೆ. ಒಬ್ಬ ಹಿಂದುಳಿದ ವರ್ಗದ ಯುವಕನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ.  ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು.
-ಹರಿಹರ ಆನಂದಸ್ವಾಮಿ, ರಾಜ್ಯಾಧ್ಯಕ್ಷ, ದಲಿತ ಸಂಘರ್ಷ ಸಮಿತಿ.

ತಿ.ನರಸೀಪುರ ಟೌನ್‍ನಲ್ಲಿ ಚೇತನ್ ಎಂಬ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಸಂಬಂಧ ಹಲ್ಲೆಗೊಳಗಾದ ಯುವಕ ಚೇತನ್ ದೂರನ್ನು ನೀಡಿದ್ದು ಎಎಫ್‍ಐಆರ್ ದಾಖಲಿಸಲಾಗಿದೆ ಎಂದು ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಗೋವಿಂದರಾಜು ತಿಳಿಸಿದರು.

ಘಟನೆ ಸಂಬಂಧ 'ವಾರ್ತಾಭಾರತಿ'ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಈ ಘಟನೆ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ. ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಕೊಡುವಂತೆ ಸೂಚಿಸಲಾಗಿದ್ದು, ವರದಿ ಬಂದ ನಂತರ ಸಂಬಂಧ ಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News