'ವಂಚಕ ಯುವರಾಜ್ ನಿಂದ ಹಣ ವರ್ಗಾವಣೆ' ಬಗ್ಗೆ ಸ್ಪಷ್ಟನೆ ನೀಡಿದ ನಟಿ ರಾಧಿಕಾ
ಬೆಂಗಳೂರು, ಜ.6: ಬಿಜೆಪಿ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್ ಯಾನೆ ಸ್ವಾಮಿ ಪ್ರಕರಣದಲ್ಲಿ ಸಿನೆಮಾ ನಟಿ ರಾಧಿಕಾ ಹೆಸರು ಥಳುಕು ಹಾಕಿಕೊಂಡಿದ್ದು, ಹಣ ವರ್ಗಾವಣೆ ಮಾಡಿರುವ ಮಾಹಿತಿ ಬಹಿರಂಗಗೊಂಡಿದೆ.
ಬಂಧಿತ ಆರೋಪಿ ಯುವರಾಜ್ ತನ್ನ ಪತ್ನಿಯ ಬ್ಯಾಂಕ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಅವರ ಬ್ಯಾಂಕ್ ಖಾತೆಗೆ ಮೊದಲನೇ ಹಂತದಲ್ಲಿ 15 ಲಕ್ಷ ರೂ. ವರ್ಗಾವಣೆ ಮಾಡಿ, ತದನಂತರ ಹಂತ ಹಂತವಾಗಿ ಒಟ್ಟು 75 ಲಕ್ಷ ರೂ. ನೀಡಿರುವ ಮಾಹಿತಿ ಲಭಿಸಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಈಗಾಗಲೇ ಸಿಸಿಬಿ ತನಿಖಾಧಿಕಾರಿಗಳು ರಾಧಿಕಾ ಸಹೋದರ ರವಿರಾಜ್ ಎಂಬುವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ರಾಧಿಕಾ ಸ್ಪಷ್ಟನೆ: ಪ್ರಕರಣ ಕುರಿತು ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಯುವರಾಜ್ ಅವರು ನನ್ನ ತಂದೆಯ ಸ್ನೇಹಿತರು. 17 ವರ್ಷಗಳಿಂದ ಅವರ ಪರಿಚಯವಿದೆ. ಸಿನಿಮಾವೊಂದರ ವಿಚಾರವಾಗಿ ಯುವರಾಜ್ ಅವರಿಂದ 15 ಲಕ್ಷ ಹಣ ನನ್ನ ಖಾತೆಗೆ ಬಂದಿತ್ತು ಎಂದು ತಿಳಿಸಿದರು.
ಯುವರಾಜ್ ಅವರು ತಮ್ಮ ಪತ್ನಿ ಹೆಸರಿನಲ್ಲಿ ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದಾರೆ. ಐತಿಹಾಸಿಕ ಸಿನಿಮಾ ಮಾಡುವ ಸಂಬಂಧ ನನ್ನೊಂದಿಗೆ ಚರ್ಚಿಸಿದ್ದರು. ಸಿನಿಮಾ ಮಾಡಲು ನಾನೂ ಒಪ್ಪಿದ್ದೆ. ಮುಂಗಡವಾಗಿ 15 ಲಕ್ಷ ನೀಡಿದ್ದರು. ಬೇರೆ ನಿರ್ಮಾಪಕರಿಂದ 60 ಲಕ್ಷ ಹಾಕಿಸಿದ್ದರು. ಆದರೆ, ಸಿನಿಮಾ ಅಗ್ರಿಮೆಂಟ್ ಆಗಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್‍ಗೂ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದರು.
ಇನ್ನು, ಯುವರಾಜ್ ಅವರು ಜ್ಯೋತಿಷಿ. ಅವರು ನಮ್ಮ ಕುಟುಂಬದ ವಿಚಾರಗಳಲ್ಲಿ ಭವಿಷ್ಯ ನುಡಿದಿದ್ದರು. ಎಷ್ಟೋ ಬಾರಿ ಅವರು ಹೇಳಿದಂತೆ ನಮ್ಮ ಜೀವನದಲ್ಲಿ ಘಟನೆಗಳು ನಡೆದಿದೆ. ಆದರೆ, ಇದೀಗ ಅವರಿಂದಲೇ ಈ ರೀತಿ ಸಮಸ್ಯೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.