×
Ad

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮೊಹಮ್ಮದ್ ನಲಪಾಡ್‍ರಿಂದ ‘ಯುವ ಸ್ಪಂದನ ಯಾತ್ರೆ'

Update: 2021-01-06 22:11 IST

ಬೆಂಗಳೂರು, ಜ. 6: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಸಿರುವ ಮೊಹಮ್ಮದ್ ಹಾರಿಸ್ ನಲಪಾಡ್, 'ಯುವ ಸ್ಪಂದನ ಯಾತ್ರೆ'ಯನ್ನು ಕಲಬುರ್ಗಿಯಿಂದ ಬುಧವಾರ ಆರಂಭಿಸಿದ್ದಾರೆ.

ಕಲಬುರಗಿ, ಬೀದರ್ ಮತ್ತು ವಿಜಯಪುರದ ಯುವ ಕಾಂಗ್ರೆಸ್ ಸದಸ್ಯರ ಜೊತೆ ಸಂವಾದ ನಡೆಸಿದ ಅವರು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ತಮಗೆ ಮತ ನೀಡಿ ಪ್ರೋತ್ಸಾಹಿಸಬೇಕೆಂದು ಮೂರು ಜಿಲ್ಲೆಗಳ ಯುವ ಕಾಂಗ್ರೆಸ್ ಸದಸ್ಯರಲ್ಲಿ ಮನವಿ ಮಾಡಿದರು.

‘ಕಾಂಗ್ರೆಸ್ ಹಾಗೂ ಕರ್ನಾಟಕ ರಾಜ್ಯಕ್ಕಾಗಿ ನನ್ನ ಬದ್ಧತೆ ಹಾಗೂ ಭವಿಷ್ಯದೆಡೆಗಿನ ವಿಚಾರಗಳನ್ನು ನೋಡಿ ನನಗೆ ಮತ ಹಾಕಬೇಕಾಗಿ ಯುವಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಕೋಮುವಾದ ಹಾಗೂ ದಮನಕಾರಿ ಶಕ್ತಿಗಳು ರಾಜ್ಯವನ್ನು ಆಳುತ್ತಿವೆ. ಇದರ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುವ ಮೂಲಕ ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಹೆಮ್ಮೆ ಪಡುವಂತೆ ಮಾಡುತ್ತೇನೆ' ಎಂದು ನಲಪಾಡ್ ಭರವಸೆ ನೀಡಿದರು.

ರಾಜ್ಯದಲ್ಲಿ 6.5 ಲಕ್ಷ ಯುವ ಕಾಂಗ್ರೆಸ್ ಮತದಾರರಿದ್ದು ಆ ಪೈಕಿ 2.5 ಲಕ್ಷ ಮತದಾರರು ನಲಪಾಡ್ ಪರವಾಗಿದ್ದಾರೆಂದು ತಿಳಿಸಲಾಗಿದೆ. ಎಲೆಕ್ಟ್ರಾನಿಕ್ ಮತದಾನದ ಮೂಲಕ ನಡೆಯುವ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮತ ಹಾಕಲು ಅರ್ಹರಾಗಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಎಚ್.ಎಸ್.ಮಂಜುನಾಥ್, ರಕ್ಷಾ ರಾಮಯ್ಯ, ಮಿಥುನ್ ರೈ, ಸಂದೀಪ್ ನಾಯ್ಕ್, ಮೊಹಮ್ಮದ್ ಖಾಲೀದ್ ಹಾಗೂ ಏಕೈಕ ಮಹಿಳಾ ಅಭ್ಯರ್ಥಿ ಭವ್ಯ ಕೆ.ಆರ್. ಅವರನ್ನು ಹಿಂದಿಕ್ಕಿ ನಲಪಾಡ್ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ.

ರವಿವಾರ(ಜ.9)ದಿಂದ ಮೂರು ದಿನಗಳ ಕಾಲ ನಡೆಯಲಿರುವ ಆನ್‍ಲೈನ್ ಮತದಾನಕ್ಕೆ ಮೊದಲು ಅಂದರೆ ಜ.9ರೊಳಗೆ ರಾಜ್ಯಾದ್ಯಂತ ಪ್ರವಾಸವನ್ನು ಮಾಡಲು ನಲಪಾಡ್ ಅಭಿಲಾಷೆ ಹೊಂದಿದ್ದು, ಕೋವಿಡ್ ನಿಯಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ಯಾವುದೇ ಮತಗಟ್ಟೆಗಳಿಗೆ ಮತದಾರರು ಭೇಟಿ ನೀಡದೆ ಆನ್‍ಲೈನ್ ಮುಖಾಂತರ ಮತದಾನವನ್ನು ಮಾಡುವಂತೆ ಯುವ ಕಾಂಗ್ರೆಸ್ ಆ್ಯಪ್ ಅಭಿವೃದ್ಧಿಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News