'ಶಿಕ್ಷಕರಿಗೆ ಕೋವಿಡ್ ಸೋಂಕು ಪತ್ತೆ' ದೊಡ್ಡ ಸುದ್ದಿಯಾಗಿ ಬಿಂಬಿಸುವುದು ಸರಿಯಲ್ಲ: ಶಿಕ್ಷಣ ತಜ್ಞ ನಿರಂಜನಾರಾಧ್ಯ
ಬೆಂಗಳೂರು, ಜ.6: ರಾಜ್ಯದ ಕೆಲವು ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿರುವುದನ್ನು ದೊಡ್ಡ ಸುದ್ದಿಯನ್ನಾಗಿ ಬಿಂಬಿಸುತ್ತಿರುವುದು ಸರಿಯಲ್ಲವೆಂದು ಶಿಕ್ಷಣತಜ್ಞ ನಿರಂಜನಾರಾಧ್ಯ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಲೆಗಳನ್ನು ತೆರೆಯುವ ಮೊದಲೇ ಶಿಕ್ಷಕರಲ್ಲಿ ಕೊರೋನ ಪತ್ತೆಯ ಪರೀಕ್ಷೆಗಳನ್ನು ಸರಕಾರವು ನಡೆಸಿದ್ದು, ಅವುಗಳ ವರದಿಗಳಷ್ಟೇ ಈಗ ಬರುತ್ತಿವೆ. ಆದರೆ, ಕೊರೋನ ಸೋಂಕನ್ನೇ ನೆಪವಾಗಿಟ್ಟು ಶಾಲೆಗಳು ಪ್ರಾರಂಭವಾದ ನಂತರ ಇದನ್ನೇ ದೊಡ್ಡ ಸುದ್ದಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿ, ಪೋಷಕರಲ್ಲಿ ಅನಗತ್ಯ ಭಯವನ್ನುಂಟು ಮಾಡಲಾಗುತ್ತಿದೆ ಎಂದರು.
ಸರಕಾರವು ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಸೋಂಕಿತ ಶಿಕ್ಷಕರು ಗುರುತಿಸಲ್ಪಟ್ಟು ಶಾಲೆಗಳ ಕರ್ತವ್ಯಕ್ಕೆ ಹಾಜರಾಗದೇ ಉಳಿದಿರುವುದರಿಂದ ಆ ಶಿಕ್ಷಕರಿಂದ ಇತರ ಶಿಕ್ಷಕರಿಗಾಗಲೀ, ಮಕ್ಕಳಿಗಾಗಲೀ, ಶಾಲೆಗೆ ಬರುವ ಇತರರಿಗಾಗಲೀ ಸೋಂಕು ಹರಡದಂತೆ ತಡೆಯಲು ಸಹಾಯವಾಗಿದೆ. ಇದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲವೆಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ. ಮತ್ತು ಅವರೆಲ್ಲರೂ ಶಾಲೆಗಳಿಂದ ದೂರವೇ ಉಳಿದಿದ್ದಾರೆ. ಆದ್ದರಿಂದ ಮಾಧ್ಯಮಗಳು ಕೋವಿಡ್ ಪತ್ತೆಯನ್ನು ದೊಡ್ಡದಾಗಿ ಪ್ರಚಾರ ಮಾಡುವುದನ್ನು ನಿಲ್ಲಿಸಿ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶಾಲೆಗಳು ತೆರೆದಿರುವುದನ್ನು ಬೆಂಬಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.