ಚಿಕ್ಕಮಗಳೂರು: ಬುಧವಾರ ಒಂದೇ ದಿನ 11 ವಿದ್ಯಾರ್ಥಿಗಳು, 7 ಶಿಕ್ಷಕರಿಗೆ ಕೊರೋನ ಸೋಂಕು

Update: 2021-01-06 17:41 GMT

ಚಿಕ್ಕಮಗಳೂರು, ಜ.6: ಜಿಲ್ಲೆಯಲ್ಲಿ ಶಾಲಾ ಕಾಲೇಜು ಆರಂಭಗೊಂಡ ಬಳಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ  ಏರಿಕೆಯಾಗುತ್ತಿದ್ದು, ಬುಧವಾರ ಒಂದೇ ದಿನ 11 ಮಂದಿ ವಿದ್ಯಾರ್ಥಿಗಳು ಹಾಗೂ 7 ಮಂದಿ ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ 12 ಮಂದಿ ಶಿಕ್ಷಕರು ಮತ್ತು 15 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಂಡು ಬಂದಿರುವ ಸೋಂಕು ಸೋಂಕಿನ "ಎ" ಗುಣಲಕ್ಷಣಗಳಾಗಿದ್ದು, ಸೋಂಕಿತರಿಗೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರಾಥಮಿಕ, ದ್ವಿತೀಯ ಸಂಪರ್ಕಗಳ ಪತ್ತೆ ಕಾರ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆಯಿಂದ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡು 6 ದಿನ ಕಳೆದಿದ್ದು, 6 ದಿನಗಳಲ್ಲಿ ಈ ಪ್ರಮಾಣದಲ್ಲಿ ಸೋಂಕಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪತ್ತೆಯಾಗಿದೆ.

12 ಜನ ಶಿಕ್ಷಕರು ಮತ್ತು 15 ಜನ ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕು ಕಂಡು ಬಂದಿದೆ. ಶಿಕ್ಷಕರಿಂದ ಮಕ್ಕಳಿಗೆ ಅಥವಾ ಮಕ್ಕಳಿಂದ ಶಿಕ್ಷಕರಿಗೆ ಸೋಂಕು ಹರಡುತ್ತಿದೆಯೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಸಂಪರ್ಕಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಕೊರೋನಸೋಂಕು ತಡೆ ಹಿನ್ನೆಲೆಯಲ್ಲಿ ಸರಕಾರ ಸರಬರಾಜು ಮಾಡುವ ವ್ಯಾಕ್ಸಿನ್ ಹಂಚಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ 9,572 ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುವುದು. ಜಿಲ್ಲೆಯಲ್ಲಿ ಹೆಲ್ತ್ ಕೇರ್ ಗೆ ಸಂಬಂಧಿಸಿದ ಡಾಕ್ಟರ್ ಗಳಿಂದ ಹಿಡಿದು ಸ್ಯಾನಿಟೈಸ್ ಸಿಬ್ಬಂದಿಗೆ ಮೊದಲ ಹಂತದಲ್ಲಿ ವಾಕ್ಸಿನ್ ನೀಡಲಾಗುವುದು. ಲಸಿಕೆ ವಿತರಣೆ ಸಂಬಂಧ ಬುಧವಾರ ಸರಕಾರ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಜಿಲ್ಲೆಯ 103 ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ದಾಸ್ತಾನಿಗೆ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News