×
Ad

ಕೆರೆಯಲ್ಲಿ ಸಾವಿರಾರು ಮೀನುಗಳ ಸಾವು: ವಿಷಪ್ರಾಶಾನ ಶಂಕೆ

Update: 2021-01-06 23:18 IST

ಕಡೂರು, ಜ.6: ತಾಲೂಕಿನ ವೈ.ಮಲ್ಲಾಪುರ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದು ಬುಧವಾರ ಬೆಳಕಿಗೆ ಬಂದಿದೆ.

ಈ ಕೆರೆಯಲ್ಲಿ ಮೀನು ಸಾಗಾಣಿಕೆ ಮಾಡಲು ತಮ್ಮಯ್ಯ ಎಂಬವರು ಗ್ರಾಮ ಪಂಚಾಯತ್‍ನಿಂದ 75 ಸಾವಿರ ರೂ.ಗೆ ಗುತ್ತಿಗೆ ಪಡೆದಿದ್ದರು. ನಂತರ 3 ಲಕ್ಷ ಮೀನುಮರಿಗಳನ್ನು ಬಿಟ್ಟಿದ್ದರು. ಸುಮಾರು ಎರಡು ಕೆಜಿ ತೂಗುವಷ್ಟು ಮೀನುಗಳು ಬೆಳವಣಿಗೆಯಾಗಿದ್ದವು. ಸದ್ಯದಲ್ಲಿಯೇ ಮೀನು ಹಿಡಿಯಲು ಆರಂಭಿಸಬೇಕಿತ್ತು. ಬುಧವಾರ ಬೆಳಗ್ಗೆ ಕೆರೆಯ ಬಳಿ ಹೋದ ಗ್ರಾಮಸ್ಥರು ಮೀನುಗಳು ದಡದಲ್ಲಿ ತೇಲುತ್ತಿರುವುದನ್ನು ನೋಡಿ ಸುದ್ದಿ ಮುಟ್ಟಿಸಿದ್ದಾರೆ.

ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿರುವುದನ್ನು ಕಂಡು ಆತಂಕಕ್ಕೊಳಗಾದ ತಮ್ಮಯ್ಯ ಸಿಂಗಟಗೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ತಹಶೀಲ್ದಾರ್ ಮತ್ತು ಮೀನುಗಾರಿಕಾ ಇಲಾಖೆಗೂ ತಿಳಿಸಿದ್ದಾರೆ. ಪಿಎಸೈ ಲೀಲಾವತಿ ಕೆರೆ ಬಳಿ ಬಂದು ಪರಿಶೀಲಿಸಿದ್ದಾರೆ. ಮೀನುಗಾರಿಕಾ ಇಲಾಖೆಯವರು ನೀರನ್ನು ಪರಿಶೀಲಿಸಿ ವಿಷ ಮಿಶ್ರಿತವಾಗಿದೆ ಎಂದು ವರದಿ ನೀಡಿದರೆ ತಾವು ತನಿಖೆ ನಡೆಸಬಹುದು ಎಂದು ಅವರು ಹೇಳಿದ್ದಾರೆ. ಆದರೆ ಬುಧವಾರ ಸಂಜೆಯ ತನಕ ಮೀನುಗಾರಿಕಾ ಇಲಾಖೆಯ ಯಾರೊಬ್ಬರೂ ಕೆರೆಗೆ ಭೇಟಿ ನೀಡಿರಲಿಲ್ಲ.

ಈ ನಡುವೆ ದೊಡ್ಡ ಮೀನುಗಳು ಮೇಲಕ್ಕೆ ಬರಲಾಗದೆ ನೀರಿನಡಿಯಲ್ಲೆ ಒದ್ದಾಡಿ ನೆಲಕಚ್ಚಿ ಸಾಯುತ್ತಿದ್ದ ದೃಶ್ಯ ಕಂಡುಬಂದಿದೆ. ಕೆಲ ನೀರು ಕೋಳಿಗಳೂ ಸತ್ತಿರುವುದು ಕಂಡುಬಂದಿದೆ. ಕೊಕ್ಕರೆಗಳು ಮಂಕಾಗಿ ದಡದ ಪೊದೆಗಳಲ್ಲಿ ಕುಳಿತಿವೆ.

ವಿಷ ಮಿಶ್ರಣವಾಗಿರುವುದರಿಂದ ಮೀನುಗಳು ಸತ್ತಿವೆಯೇ ಎಂಬುದು ತಿಳಿದಿಲ್ಲ. ಉದ್ದೇಶಪೂರ್ವಕವಾಗಿ ಕೆರೆನೀರಿಗೆ ವಿಷ ಬೆರೆಸಿರುವ ಬಗ್ಗೆಯೂ ತಿಳಿದಿಲ್ಲ. ಅಂತಹ ಕೆಲಸವನ್ನು ಬಹುಶಃ ಯಾರೂ ಮಾಡಿರುವ ಸಾಧ್ಯತೆಯಿಲ್ಲ. ಈ ಬಗ್ಗೆ ಮೀನುಗಾರಿಕಾ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಏಳರಿಂದ ಎಂಟು ಲಕ್ಷ ನಷ್ಟವಾಗಿದೆ. ಇದನ್ನೇ ನಂಬಿ ಸಾಲ ಮಾಡಿಕೊಂಡಿದ್ದ ನನಗೆ ದಿಕ್ಕು ತೋಚದಂತಾಗಿದೆ ಎಂದು ತಮ್ಮಯ್ಯ ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News