‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಬಗ್ಗೆ ಸರಕಾರ ಸ್ಪಷ್ಟನೆ ನೀಡಲಿ: ಎಸ್.ಎಂ.ಜಾಮದಾರ್
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಸರಕಾರದ ವತಿಯಿಂದ ಎಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಾಹೀರಾತಿನ ಮೊದಲ ಸಾಲಿನಲ್ಲಿರುವ ‘ಸನಾತನ ಪ್ರಗತಿಪರ ಚಿಂತನೆಯ ಮರು ಸೃಷ್ಟಿ’ ವಾಕ್ಯ ವಿಚಿತ್ರವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ತಿಳಿಸಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಸವಣ್ಣ, ನೂರಾರು ಶರಣರು ಅನುಭವ ಮಂಟಪವನ್ನು ಸ್ಥಾಪಿಸಿ ಸನಾತನ ಸಂಸ್ಕೃತಿಯ ಮೂಲ ತತ್ವಗಳಿಗೆ ವಿರುದ್ಧವಾದ ಕೆಲಸ ಮಾಡಿದರು. ಆ ಮೂಲಕ ಕ್ರಾಂತಿಕಾರಿ ಬದಲಾವಣೆ ತರಲು ಅನುಭವ ಮಂಟಪ ಪ್ರಾರಂಭಿಸಿದ್ದು, ನಿರ್ಮಾಣ ಮಾಡಿದ್ದು ಎಂದರು.
ಸರಕಾರದ ಜಾಹೀರಾತಿನಲ್ಲಿ ಸನಾತನ ಚಿಂತನೆಯನ್ನು ಅನುಭವ ಮಂಪಟದ ಮೂಲಕ ಮತ್ತೆ ಮರುಸೃಷ್ಟಿ ಮಾಡುವುದಾಗಿ ಹೇಳಲಾಗಿದೆ. ಯಾವುದರ ಮರುಸೃಷ್ಟಿ? ಬಸವೇಶ್ವರರು ಬೋಧಿಸಿದ ತತ್ವಗಳ ಮರುಸೃಷ್ಟಿಯೇ? ಅಥವಾ ಸನಾತನ ಪರಂಪರೆಯ ಮರುಸೃಷ್ಟಿಯೆ? ಎಂಬುದರ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ ಅವರು, ಸನಾತನ ಸಂಸ್ಕೃತಿಯನ್ನು ಬಸವಣ್ಣನ ಅನುಭವ ಮಂಟಪದ ಮೂಲಕ ಮತ್ತೆ ಮರು ಸೃಷ್ಟಿ ಮಾಡುತ್ತಾರೆ ಅಂದರೆ ಅದು ಪೂರ್ವ, ಪಶ್ಚಿಮವನ್ನು ಒಂದು ಮಾಡಿದಂತೆ ಎಂದರು.
ಈ ಜಾಹೀರಾತಿನಲ್ಲಿರುವ ವಾಕ್ಯವನ್ನು ಬರೆದ ವ್ಯಕ್ತಿಯಾಗಲಿ, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಾರ್ತಾ ಇಲಾಖೆಯಾಗಲಿ ಅಥವಾ ಅದನ್ನು ಪ್ರಕಟಿಸಿದ ಪತ್ರಿಕೆಗಳಾಗಿ ಯಾರೊಬ್ಬರೂ ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ನಾವು ಅದನ್ನು ಖಂಡಿಸುತ್ತೇವೆ ಎಂದು ಜಾಮದಾರ್ ಹೇಳಿದರು.
ಟೆಂಡರ್ ಆಗದೆ ಅಡಿಗಲ್ಲು ಸಮಾರಂಭ ಸರಿಯಲ್ಲ: ಸರಕಾರದ ವತಿಯಿಂದ ಯಾವುದೇ ಕೆಲಸಕ್ಕೆ ಅಡಿಗಲ್ಲು ಹಾಕುವ ಪೂರ್ವದಲ್ಲಿ ಆ ಕಾಮಗಾರಿಗೆ ಟೆಂಡರ್ ಆಗಿ, ಸರಕಾರದ ಒಪ್ಪಿಗೆ ಸಿಕ್ಕಿರಬೇಕು. ಹಣಕಾಸಿನ ವ್ಯವಸ್ಥೆ ಆಗಿರಬೇಕು. ಟೆಂಡರ್ ಆಗದೆ, ಕಾಮಗಾರಿಗೆ ಒಪ್ಪಿಗೆಯೂ ಸಿಗದೆ ಇವತ್ತು ಅನುಭವ ಮಂಟಪ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿದೆ ಎಂದು ಅವರು ಟೀಕಿಸಿದರು.
ಈ ಯೋಜನೆಗೆ 500 ಕೋಟಿ ರೂ.ಗಳನ್ನು ನೀಡಲು ತಾತ್ವಿಕ ಒಪ್ಪಿಗೆ ಮಾಡಿದ್ದು, ಒಂದು ವರ್ಷದ ಹಿಂದೆ. ಅದಕ್ಕೆ ಹಣ ಬಿಡುಗಡೆಯಾಗಿರುವ ಆದೇಶದ ಪ್ರತಿ ನಿನ್ನೆ ಹೊರಡಿಸಲಾಗಿದೆ. ಹಣ ಇನ್ನು ಮುಟ್ಟಿಲ್ಲ. ಕಳೆದ ಸಾಲಿನ ಡಿಸೆಂಬರ್ 14ರಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರು ಕರೆದಿರುವ ಟೆಂಡರ್ ಈ ಕಾಮಗಾರಿ ಮಾಡಲು ಅಲ್ಲ. ಬದಲಾಗಿ, ಈ ಕಾಮಗಾರಿಗೆ ಸಂಬಂಧಪಟ್ಟ ನಕ್ಷೆ, ಅಂದಾಜು ಪಟ್ಟಿ ತಯಾರು ಮಾಡಲು, ಒಬ್ಬ ಕನ್ಸಲ್ಟೆಂಟ್ ಅನ್ನು ನೇಮಕ ಮಾಡಿಕೊಳ್ಳಲು. ಆ ಟೆಂಡರ್ ಮೊತ್ತ 5 ಕೋಟಿ ರೂ.ಗಳು ಎಂದು ಜಾಮದಾರ್ ಹೇಳಿದರು.
ಟೆಂಡರ್ ಸ್ವೀಕರಿಸಲು ಜ.16 ಕೊನೆಯ ದಿನಾಂಕ. ಅದಾದ ನಂತರ ಕನ್ಸಲ್ಟೆಂಟ್‍ಗಳು ಹಾಕಿದ ಟೆಂಡರ್ ಗಳನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಮೌಲ್ಯೀಕರಣ ಮಾಡಿ, ಸ್ವೀಕಾರ ಮಾಡಿ, ಮುಗಿಸುವ ಪ್ರಕ್ರಿಯೆ ಜನವರಿ ಅಂತ್ಯದವರೆಗೆ ಆಗಬಹುದು. ಅದಾದ ನಂತರ ಯಾವ ತಾಂತ್ರಿಕ ಸಲಹೆಗಾರ ಅಥವಾ ಕನ್ಸಲ್ಟೆಂಟ್ ಆಯ್ಕೆಯಾಗುತ್ತಾನೋ ಆತನಿಗೆ ಈ ಅಂದಾಜುಗಳು, ನಕ್ಷೆಗಳನ್ನು ತಯಾರಿಸಲು ಮೂರು ತಿಂಗಳ ಕಾಲಾವಕಾಶ ಕೊಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಫೆಬ್ರವರಿ 1ರಂದು ಈ ಅವಧಿ ಆರಂಭವಾದರೂ ಮುಗಿಯುವುದು ಎಪ್ರಿಲ್ 30ಕ್ಕೆ. ಎಪ್ರಿಲ್ 30ಕ್ಕೆ ಅಂದಾಜುಪಟ್ಟಿಗಳು, ನಕ್ಷೆಗಳು ಸಲ್ಲಿಕೆಯಾದರೆ, ಅವುಗಳಿಗೆ ಸರಕಾರದ ಅನುಮೋದನೆ ಪಡೆಯಬೇಕು ಎಂದು ಅವರು ತಿಳಿಸಿದರು.
ಅನುಮೋದನೆ ಪಡೆಯಲು ಸಚಿವ ಸಂಪುಟ ಸಭೆಗೆ ಬರಬೇಕು. 100 ಕೋಟಿ ರೂ.ಟೆಂಡರ್ ಇದೆ. ಆಗ ಅದಕ್ಕೆ ಒಪ್ಪಿಗೆ ಪಡೆಯಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಬೇಕು. ಮೇ ಅಂತ್ಯದವರೆಗೆ ಅದಕ್ಕೆ ಅನುಮೋದನೆ ಸಿಗುವುದಿಲ್ಲ. ಕೆಟಿಟಿಪಿ ಕಾಯ್ದೆ ಪ್ರಕಾರ ಆ ಟೆಂಡರ್ ಕರೆಯಬೇಕು. ಜೂನ್, ಜುಲೈ, ಆಗಸ್ಟ್ ಕನಿಷ್ಠ ಮೂರು ತಿಂಗಳಾದರೂ ಬೇಕು. ಈ ಅವಧಿಯಲ್ಲಿ ಆ ಟೆಂಡರ್ ಪ್ರಕ್ರಿಯೆ ಮುಗಿಯುವುದಿಲ್ಲ. ಆದಾದ ನಂತರ ಪುನಃ ಸರಕಾರದ ಅನುಮೋದನೆಗೆ ಬರಬೇಕು ಎಂದು ಜಾಮದಾರ್ ವಿವರಿಸಿದರು.
ಸೆಪ್ಟಂಬರ್ ಎಂದು ಭಾವಿಸಿದರೂ, ಸರಕಾರದ ಅನುಮೋದನೆ ಸಿಕ್ಕಿದ ಬಳಿಕ ಕಾರ್ಯಾದೇಶ ಅಕ್ಟೋಬರ್ ನಲ್ಲಿ ಸಿಗುತ್ತದೆ. ಆತ ಕೆಲಸ ಪ್ರಾರಂಭ ಮಾಡಲು ಕನಿಷ್ಠ ಒಂದು ತಿಂಗಳು ಆತನಿಗೆ ಕಾಲಾವಕಾಶ ನೀಡಬೇಕು. ಆ ಅವಧಿ ನಂತರ ನವೆಂಬರ್ ಮೊದಲ ವಾರದಲ್ಲಿ ಕೆಲಸ ಆರಂಭವಾಗುತ್ತದೆ. 11 ತಿಂಗಳ ಮೊದಲೇ ಯಾವ ವ್ಯವಸ್ಥೆಯೂ ಇಲ್ಲದೆ, ಅಂದಾಜು ಪಟ್ಟಿಯಿಲ್ಲದೆ, ಟೆಂಡರ್ ಇಲ್ಲದೆ, ನಕ್ಷೆ ಇಲ್ಲದೆ, ತರಾತುರಿಯಲ್ಲಿ ಇವತ್ತು ಶಂಕುಸ್ಥಾಪನೆ ಮಾಡುವ ಅಗತ್ಯವೇನಿತ್ತು? ಎಂದು ಜಾಮದಾರ್ ಪ್ರಶ್ನಿಸಿದರು.
ಇದಕ್ಕೆ ಮೂಲ ಕಾರಣ ಮುಂಬರುವ ಕೆಲವೆ ದಿನಗಳಲ್ಲಿ ಬಸವಕಲ್ಯಾಣದ ಉಪ ಚುನಾವಣೆ ಘೋಷಣೆಯಾಗಲಿದೆ. ಅದಕ್ಕಾಗಿ ಮೊದಲೆ ಇದನ್ನು ಮಾಡಿ ಪಾರಾಗಬೇಕೆಂದು ತರಾತುರಿಯಲ್ಲಿ ಸರಕಾರ ಈ ಕೆಲಸ ಮಾಡಿದೆ. ಇದು ಸರಿಯಾದ ಕ್ರಮವಲ್ಲ. ಸಾರ್ವಜನಿಕರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜಾಮದಾರ್ ಮನವಿ ಮಾಡಿದರು.