ರಾಜ್ಯ ಸರಕಾರ ರೈತರನ್ನು ದಿವಾಳಿ ಮಾಡಲು ಮುಂದಾಗಿದೆ: ಕೋಡಿಹಳ್ಳಿ ಚಂದ್ರಶೇಖರ್

Update: 2021-01-07 17:58 GMT

ಬೆಂಗಳೂರು, ಜ.7: ರಾಜ್ಯ ಸರಕಾರ ರಾಜ್ಯದಲ್ಲಿ ಕೃಷಿ ಕಾಯ್ದೆಗಳ ಜತೆಗೆ ಜಾನುವಾರು ಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೆ ತಂದು, ರಾಜ್ಯದ ರೈತರನ್ನು ಸಂಪೂರ್ಣವಾಗಿ ಕೃಷಿಯಿಂದ ಬೇರ್ಪಡಿಸಿ ಬದುಕನ್ನು ದಿವಾಳಿ ಮಾಡಲು ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಖಂಡಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರಕಾರ ರೈತರ ಒಪ್ಪಿಗೆ ಇಲ್ಲದೇ ಸುಗ್ರೀವಾಜ್ಞೆಯ ಮೂಲಕ ಹೊಸ ಕಾನೂನುಗಳನ್ನು ಜಾರಿಗೆ ತಂದಾಗಿದೆ. ಇದರ ವಿರುದ್ಧ ಹೊಸದಿಲ್ಲಿ ಸೇರಿದಂತೆ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ರಾಜ್ಯ ಬಿಜೆಪಿ ಸರಕಾರ ಕೃಷಿ ತಿದ್ದುಪಡಿ ಹಾಗೂ ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಅಂಗೀಕರಿಸಿದೆ ಎಂದು ಆಪಾದಿಸಿದ್ದಾರೆ.

1964ರ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಗೋವು ಹಾಲು ಕೊಡುವುದನ್ನು ನಿಲ್ಲಿಸಿದ ಹಾಗೂ 12 ವರ್ಷಗಳ ನಂತರ ಅದನ್ನು ಹತ್ಯೆ ಮಾಡಬಹುದಾಗಿತ್ತು. ಆದರೆ, ಈಗಿನ ತಿದ್ದುಪಡಿ ಕಾಯ್ದೆಯಲ್ಲಿ ಇದರ ಪ್ರಸ್ತಾಪವೇ ಇಲ್ಲ. ಈಗ ಗೋವುಗಳ ಜತೆಗೆ ಎತ್ತು, ಎಮ್ಮೆ, ಕೋಣ ಒಳಗೊಂಡಂತೆ ಎಲ್ಲವನ್ನೂ ಜಾನುವಾರು ಹತ್ಯೆ ನಿಷೇಧ ಕಾನೂನಿನ ಕೆಳಗೆ ತರಲಾಗಿದೆ. ಇದು ಕೃಷಿ ವಲಯದ ಮೇಲೆ ಆರ್ಥಿಕ ದಿವಾಳಿಯನ್ನು ಉಂಟುಮಾಡುವ ನೀತಿಯಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಈ ಜಾನುವಾರು ಹತ್ಯೆ ಕಾಯ್ದೆಯಿಂದ ಕೃಷಿ ಚಟುವಟಿಕೆ ಹಂತ, ಹಂತವಾಗಿ ಕುಂಠಿತವಾಗಲಿದೆ. ಹಾಗೂ ಸಂಪೂರ್ಣವಾಗಿ ಜಾನುವಾರುಗಳನ್ನು ಕೃಷಿ ವಲಯದಿಂದ ಬೇರ್ಪಡಿಸಿ ಹೈನುಗಾರಿಕೆಗೆ ಅಮೇರಿಕಾ ಕಂಪೆನಿಗಳ ಮೇಲೆ ಅವಲಂಬನೆಯಾಗುವ ತೀರ್ಮಾನ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮೋಹನ್‍ರಾಜ್, ಕರ್ನಾಟಕ ಜನಶಕ್ತಿಯ ಕಾರ್ಯಾಧ್ಯಕ್ಷ ವೀರಸಂಗಯ್ಯ, ಭಕ್ತರಹಳ್ಳಿ ಭೈರೇಗೌಡ, ವೀರಭದ್ರಸ್ವಾಮಿ ಮತ್ತಿತರರಿದ್ದರು.

ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಕೈಬಿಡಬೇಕೆಂದು ಒತ್ತಾಯಿಸಿಸಲು ಹಾಗೂ ಇದರ ಸಂಬಂಧ ರಾಜ್ಯಾದ್ಯಂತ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜ.10ರಂದು ರವಿವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ತಜ್ಞರೊಂದಿಗೆ ವಿಚಾರ ಸಂಕಿರಣ ಆಯೋಜಿಸಲಾಗಿದೆ.

-ವೀರಸಂಗಯ್ಯ, ಕಾರ್ಯಾಧ್ಯಕ್ಷ, ಕರ್ನಾಟಕ ಜನಶಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News