‘ಸನಾತನ' ಭಾರತದ ಸಾಮರಸ್ಯವನ್ನು ಅನುಭವ ಮಂಟಪ ಮರುಸೃಷ್ಟಿಸಲಿದೆ: ನಳಿನ್ ಕುಮಾರ್ ಕಟೀಲು

Update: 2021-01-07 16:23 GMT

ಬೆಂಗಳೂರು, ಜ. 7: ‘ರಾಜ್ಯದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಮರುಸೃಷ್ಟಿಯಾಗುತ್ತಿರುವುದು ಅನೇಕ ಬದಲಾವಣೆಗಳನ್ನು ತರಲಿದೆ. ಸನಾತನ ಭಾರತದ ತತ್ವ-ಸಿದ್ಧಾಂತ ಮತ್ತು ಸಾಮಾಜಿಕ ಸಾಮರಸ್ಯವನ್ನು ಅನುಭವ ಮಂಟಪವು ಮತ್ತೆ ಮರುಸೃಷ್ಟಿಸಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಈ ಹಿಂದೆ ಪ್ರಧಾನಿ ಮೋದಿಯವರೂ ಇದರ ಬಗ್ಗೆ ಪ್ರಸ್ತಾಪಿಸಿದ್ದರು. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿಯ ದ್ಯೋತಕವಾಗಿ ‘ಅನುಭವ ಮಂಟಪ’ದ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿರುವುದು ಹೆಮ್ಮೆಯ ವಿಚಾರ' ಎಂದು ಬಣ್ಣಿಸಿದ್ದಾರೆ.

‘ಸಮಾಜಕ್ಕೆ ಬಸವಣ್ಣನವರ ತತ್ವ-ಸಿದ್ಧಾಂತಗಳನ್ನು ಅರಿಕೆ ಮಾಡಿಕೊಡಲಿರುವ ಈ ಮಹತ್ಕಾರ್ಯವನ್ನು ನೆರವೇರಿಸಿದ ಸಿಎಂ ಬಿಎಸ್‍ವೈ ಅವರಿಗೆ ಧನ್ಯವಾದಗಳು. 12ನೆ ಶತಮಾನದಲ್ಲಿ ಸರ್ವಸಮಾನತೆ, ಮಾನವೀಯ ಮೌಲ್ಯ ಮತ್ತು ನೈತಿಕತೆಯ ಸಾರ ಸದ್ಗುಣಗಳನ್ನು ವಿಶ್ವಕ್ಕೆ ಪ್ರಚುರಪಡಿಸಿ, ಕಾಯಕ ತತ್ವ, ಸರಳತೆ ಮತ್ತು ಅಹಿಂಸೆಯ ತತ್ವಗಳನ್ನು ಪ್ರತಿಪಾದಿಸಿದ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಸಾಮಾಜಿಕ ಪ್ರಗತಿಯ ಕ್ರಾಂತಿಕಾರಿ ಬದಲಾವಣೆಗೆ ಶ್ರಮವಹಿಸಿತ್ತು' ಎಂದು ಸ್ಮರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News