‘ನಿರುದ್ಯೋಗಂ ಬಿಜೆಪಿ ಲಕ್ಷಣಂ': ಟ್ವಿಟರ್ ನಲ್ಲಿ ಕಾಂಗ್ರೆಸ್ ನಿಂದ ‘ಪಕೋಡ ಬಿಜೆಪಿ’ ಅಭಿಯಾನ

Update: 2021-01-07 17:44 GMT

ಬೆಂಗಳೂರು, ಜ.7: ಕೇಂದ್ರದಲ್ಲಿ ಅಧಿಕಾರದಲ್ಲಿರುವ ‘ಪಕೋಡ’ ಬಿಜೆಪಿ ಸರಕಾರ, ಯುವಕರಿಗೆ ಭರವಸೆ ನೀಡಿದಂತೆ ಉದ್ಯೋಗ ಅವಕಾಶಗಳನ್ನು ಕಲ್ಪಿಸದೆ ವಂಚನೆ ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಬಿಜೆಪಿ ಸರಕಾರದ ವಿರುದ್ಧ ಟ್ವಿಟರ್ ನಲ್ಲಿ ‘ಪಕೋಡ ಬಿಜೆಪಿ’ ಎಂಬ ಅಭಿಯಾನ ನಡೆಸಿದೆ.

ದೇಶದ ನಿರುದ್ಯೋಗ ಪ್ರಮಾಣ ಶೇ.24ಕ್ಕೆ ಏರಿದೆ. ನರೇಂದ್ರ ಮೋದಿ ಸರಕಾರದ ದುರಾಡಳಿತದಲ್ಲಿ 45 ವರ್ಷಗಳ ಐತಿಹಾಸಿಕ ನಿರುದ್ಯೋಗ ದಾಖಲಾಗಿತ್ತು. ಇದಾದ ನಂತರ ಆರ್ಥಿಕ ಕುಸಿತ, ಅವೈಜ್ಞಾನಿಕ ಲಾಕ್‍ಡೌನ್, 12 ಕೋಟಿ ಉದ್ಯೋಗಳು ನಷ್ಟವಾಗಿವೆ. ರಾಜ್ಯ ಬಿಜೆಪಿ ನಿಮಗೆ ‘ನಿರುದ್ಯೋಗಂ ಬಿಜೆಪಿ ಲಕ್ಷಣಂ’ ಮಾತು ಸೂಕ್ತವೆನಿಸುತ್ತಿದೆ ‘ಪಕೋಡ ಬಿಜೆಪಿ’ ಎಂದು ಕಾಂಗ್ರೆಸ್ ಟೀಕಿಸಿದೆ.

ನಿರುದ್ಯೋಗಂ ಬಿಜೆಪಿ ಲಕ್ಷಣಂ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂಬ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಯುವಕರನ್ನು ನಿರುದ್ಯೋಗದ ಸುಳಿಗೆ ತಳ್ಳಿದೆ. ಮಾತು ಉಳಿಸಿಕೊಳ್ಳದ ಬಿಜೆಪಿ ನಾಯಕರು ವಚನಭ್ರಷ್ಟರಾಗಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಯುವಕರನ್ನು ಉದ್ಯೋಗ ವಂಚಿತರನ್ನಾಗಿಸಿ ದೇಶವನ್ನು ಕತ್ತಲೆಗೆ ನೂಕಿದೆ ಎಂದು ಕಾಂಗ್ರೆಸ್ ದೂರಿದೆ.

ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಏರಿಕೆಯಾಗಿದ್ದು, ‘ಅಗತ್ಯ ವಸ್ತುಗಳ ಬೆಲೆ, ಇಂಧನ ತೈಲಗಳ ಬೆಲೆ, ಅಡುಗೆ ಅನಿಲದ ಬೆಲೆ’, ಇಳಿಕೆಯಾಗಿದ್ದು, ರೂಪಾಯಿ ಮೌಲ್ಯ, ಉದ್ಯೋಗಗಳು, ಜಿಡಿಪಿ, ದೇಶದ ಗೌರವ, ವ್ಯಕ್ತಿ ಸ್ವಾತಂತ್ರ್ಯ. ರಾಜ್ಯ ಬಿಜೆಪಿ ನಿಮ್ಮ ಈ ‘ಏರಿಕೆ’ಗಳಿಂದ ಜನ ಕಂಗಾಲು, ‘ಇಳಿಕೆ’ಗಳಿಂದ ದೇಶ ಕಂಗಾಲು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

‘ನಿರುದ್ಯೋಗಂ ಬಿಜೆಪಿ ಲಕ್ಷಣಂ’ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಇಲ್ಲ ಎಂದು ಕರ್ನಾಟಕದ ಓಲಾ ಕಂಪನಿ ತಮಿಳುನಾಡಿನಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. ಪೆಗಟ್ರಾನ್, ಟಾಟಾ ಸಮೂಹ ಬಂಡವಾಳ ಹೂಡಿಕೆ ಮಾಡಲು ನಿರಾಕರಿಸಿವೆ. ರಫೆಲ್ ಒಪ್ಪಂದವನ್ನೂ ಎಚ್.ಎ.ಎಲ್‍ಗೆ ನೀಡಲಿಲ್ಲ. ರಾಜ್ಯದ ಯುವಕರಿಗೆ ಬಿಜೆಪಿ ದ್ರೋಹ ಬಗೆದಿದೆ, ‘ಪಕೋಡ ಬಿಜೆಪಿ’ ಎಂದು ಕಾಂಗ್ರೆಸ್ ಟೀಕಿಸಿದೆ.

ನೋಟ್ ಬ್ಯಾನ್, ಗಬ್ಬರ್ ಸಿಂಗ್ ಟ್ಯಾಕ್ಸ್, ಕೊರೋನ ನಿರ್ವಹಣೆಯಲ್ಲಿ ವೈಫಲ್ಯ, ಅವೈಜ್ಞಾನಿಕ ಲಾಕ್ ಡೌನ್, ಇವೆಲ್ಲವೂ ನರೇಂದ್ರ ಮೋದಿ ಸರಕಾರ ಯುವ ಸಮುದಾಯವನ್ನು ಉದ್ಯೋಗವಂಚಿತರನ್ನಾಗಿಸಲು ಪ್ರಯೋಗಿಸಿದ ಅಸ್ತ್ರಗಳು. ಉದ್ಯೋಗ ಸೃಷ್ಟಿಸುವುದಿರಲಿ, ಇದ್ದ ಉದ್ಯೋಗವನ್ನೂ ಕಿತ್ತುಕೊಂಡಿದೆ ಎಂದು ಕಾಂಗ್ರೆಸ್ ಕಿಡಿಗಾರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News