ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲು ಏನೂ ಉಳಿದಿಲ್ಲ: ಶಾಸಕ ಜಿ.ಟಿ.ದೇವೇಗೌಡ

Update: 2021-01-07 18:16 GMT

ಮೈಸೂರು,ಜ.7: ಸಮ್ಮಿಶ್ರ ಸರ್ಕಾರ ಬಿದ್ದ ದಿನವೇ ನಾನು ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣರಿಗೆ ಕೈ ಮುಗಿದು ಬಂದಿದ್ದೇನೆ. ಅಂದಿನಿಂದ ಈವರೆಗೂ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿಲ್ಲ, ಮಾತನಾಡಲು ಏನೂ ಉಳಿದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠರು ಏನು ಬೇಕಾದರೂ ತೀರ್ಮಾನ ಕೈಗೊಳ್ಳಲಿ. ಮೈಸೂರಿಗೆ ಬಂದು ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುತ್ತೀನಿ ಅಂದಿದ್ದಾರೆ. ಅದನ್ನು ನಾನು ಪ್ರೀತಿಯಿಂದ ಸ್ವಾಗತ ಮಾಡುತ್ತೇನೆ. ಪಕ್ಷ ಶುದ್ಧಿ ಮಾಡುವ ಮೂಹೂರ್ತ ಮೈಸೂರಿನಿಂದಲೇ ಶುರುವಾಗಲಿ ಅಂತ ಅಂದುಕೊಂಡಿದ್ದಾರೆ. ಆಗಲಿ ಅವರ ನಿರ್ಧಾರಗಳನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ ಎಂದು ತಿಳಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಉಚ್ಚಾಟನೆ ಮಾಡಲಿ. ಅದನ್ನು ನಾನು ಸ್ವಾಗತಿಸುತ್ತೇನೆ. ಉಚ್ಚಾಟನೆ ಮಾಡುವ ಪಟ್ಟಿಯಲ್ಲಿ ನಾನಿರುವುದಿಲ್ಲ. ಯಾಕೆಂದರೆ, ನಾನು ಯಾವ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನಾನೇನು ದೇವೇಗೌಡರು, ಕುಮಾರಸ್ವಾಮಿ, ರೇವಣ್ಣರ ವಿರುದ್ದ ಮಾತನಾಡಿದ್ದೀನಾ ಎಂದು ಪ್ರಶ್ನಿಸಿದರಲ್ಲದೇ, ಅದ್ಯಾವ ಪಕ್ಷ ವಿರೋಧಿ ಕೆಲಸ ಮಾಡಿದ್ದೀನಿ ತೋರಿಸಲಿ ಎಂದು ಸವಾಲು ಹಾಕಿದರು.

ಕಳೆದ ಚುನಾವಣೆಯಲ್ಲಿ ನನ್ನ ಮಗನಿಗೆ ಹುಣಸೂರಿನಲ್ಲಿ ಸ್ಪರ್ಧೆಗೆ ಟಿಕೆಟ್ ಕೊಡಲಿಲ್ಲ. ಆದರೂ, ನಾವು ಎಚ್.ವಿಶ್ವನಾಥ್ ಪರ ಪ್ರಚಾರ ಮಾಡಿ ಗೆಲ್ಲಿಸಿದೇವು. ಯಾರಿಗೋ ಅನುಕೂಲ ಮಾಡಿಕೊಡಲು ಜೆಡಿಎಸ್ ದುರ್ಬಲ ಅಭ್ಯರ್ಥಿ ಹಾಕಿಸಿಲ್ಲ. ಪಾರ್ಟಿಯಲ್ಲೇ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನಾನು ಮೌನವಾಗಿದ್ದೇನೆ. ಹಾಗಂತ ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತೀರ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಸಿಎಂ ಆಗಬೇಕು ಎಂಬ ಕೂಗು ಆರಂಭವಾಗಿದ್ದು ಮೈಸೂರಿನಿಂದಲೇ. 1994ರಲ್ಲಿ ದೇವೇಗೌಡರ ರಾಜಕೀಯ ಬದಲಾವಣೆ ಆಗಿದ್ದು ಮೈಸೂರಿನಿಂದಲೇ. ಹಾಗಾಗಿ, ಅವರಿಗೆ ಎಲ್ಲ ಕೆಲಸ ಮೈಸೂರಿನಿಂದ ಆರಂಭವಾದರೆ ಶುಭ ಅಂತ ಅನ್ನಿಸಿದೆ. ಮೈಸೂರಿನಿಂದಲೇ ಪಕ್ಷ ಶುದ್ಧಿ ಮಾಡುವ ಚಿಂತನೆ ಮಾಡಿರಬಹುದು. ಇಲ್ಲಿಂದ ಆರಂಭಿಸಿದರೆ ಪಕ್ಷ ಸಂಘಟನೆ ಆಗುವ ಉದ್ದೇಶದಿಂದ ಮಾತನಾಡಿರಬಹುದು. ನಾಯಕರ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ ಎಂದು ವ್ಯಂಗ್ಯವಾಡಿದರು.

ಪರೋಕ್ಷವಾಗಿ ಶಾಸಕ ಸಾ.ರಾ.ಮಹೇಶ್‍ಗೆ ತಿರುಗೇಟು
ಮೈಸೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗಿಂತಲೂ ದೊಡ್ಡ ಹೈಕಮಾಂಡ್ ಇದೆ ಎಂದು ಸಾ.ರಾ.ಮಹೇಶ್ ವಿರುದ್ಧ ಜಿ.ಟಿ.ದೇವೇಗೌಡ ಪರೋಕ್ಷವಾಗಿ ತಿರುಗೇಟು ನೀಡಿದರು.

ಕುಮಾರಸ್ವಾಮಿ ಮಾತ್ರ ಉಚ್ಚಾಟನೆ ಪದ ಬಳಸಿಲ್ಲ. ಮೈಸೂರಿನ ಹೈಕಮಾಂಡ್ ಕೂಡ ಮೈಸೂರಿನಿಂದಲೇ ಉಚ್ಚಾಟನೆ ಪ್ರಕ್ರಿಯೆ ಶುರುವಾಗುತ್ತೆ ಅಂತ ಹೇಳಿದೆ. ನಾನು ಯಾವುದೇ ಹಂತದಲ್ಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮೈಸೂರಿನಲ್ಲಿ ಕೆಲವರು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್ ನಿಂದ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಬೇರೆ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಂದು ವೇಳೆ ಉಚ್ಚಾಟನೆ ಮಾಡುವುದಾದರೆ ಅವರನ್ನು ಮಾಡಬೇಕು ಎಂದು ಹೇಳಿದರು.

ದೇವೇಗೌಡರಿಗೆ ಎಲ್ಲವೂ ಗೊತ್ತು. 6.5 ಕೋಟಿ ಜನರ ನರನಾಡಿಯೂ ದೇವೇಗೌಡರಿಗೆ ಗೊತ್ತಿದೆ. ಪ್ರತಿಯೊಬ್ಬ ಶಾಸಕ, ನಾಯಕರೂ ಏನೇನು ಮಾಡುತ್ತಿದ್ದಾರೆ ಅನ್ನುವುದರ ಇಂಚಿಂಚು ಮಾಹಿತಿಯೂ ಅವರಿಗೆ ಗೊತ್ತು. ಅವರಿಗೆ ನಾವು ಏನು ಹೇಳಬೇಕಿಲ್ಲ ಎಂದರು.

ಕುಮಾರಸ್ವಾಮಿ ಅವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ಬೇರೆ ರೀತಿಯ ಅಭಿಪ್ರಾಯ ಇದೆ. ಧರ್ಮಸಿಂಗ್ ಸಂಪುಟದಲ್ಲೂ ನನ್ನನ್ನು ಮಂತ್ರಿ ಮಾಡುತ್ತೇನೆ ಅಂತ ಹೇಳಿದ್ದರು. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆಗಿದ್ದಾಗಲೂ ಮಂತ್ರಿ ಮಾಡುತ್ತೇನೆ ಅಂದರು, ಮಾಡಲಿಲ್ಲ. ಕಳೆದ ಮೈತ್ರಿ ಸರ್ಕಾರದ ಸಂಪುಟ ರಚನೆ ಮಾಡುವಾಗಲೂ ದೇವೇಗೌಡರು, ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ನನ್ನನ್ನು ಇನ್‍ಫೋಸಿಸ್ ಗೆಸ್ಟ್ ಹೌಸ್‍ಗೆ ಕರೆಸಿಕೊಂಡರು. ಸಹಕಾರ ಖಾತೆ ಕೊಡುತ್ತೇನೆ ಅಂದರು. ಬಂಡೆಪ್ಪ ಕಾಶಂಪೂರ್ ಒಪ್ಪುತ್ತಿಲ್ಲ ಅಂತ ಅಬಕಾರಿ ಕೊಡುವುದಾಗಿ ಹೇಳಿದರು, ಅದನ್ನೂ ಕೊಡಲಿಲ್ಲ. ಕೊನೆಗೆ ಬೇರೊಬ್ಬರು ನನಗೆ ಕರೆ ಮಾಡಿ, ನಿಮ್ಮನ್ನು ಸಂಪುಟದಿಂದ ಹೊರಗೆ ಹಾಕಲು ಯೋಚಿಸಿದ್ದಾರೆ. ಮೊದಲು ಹೋಗಿ ಖಾತೆ ಸ್ವೀಕರಿಸಿ ಅಂದರು. ಅನಿವಾರ್ಯವಾಗಿ ಉನ್ನತ ಶಿಕ್ಷಣ ಖಾತೆ ಪಡೆದುಕೊಂಡೆ. ಯಾವ್ಯಾವ ಕಾಲದಲ್ಲಿ ಏನೇನು ಆಗಿದೆ ಅನ್ನೋದು ನನಗೆ ಚನ್ನಾಗಿ ಗೊತ್ತು. ಅದೆಲ್ಲವನ್ನೂ ನಾನು ಮನಸ್ಸಿನೊಳಗೆ ಇಟ್ಟುಕೊಂಡು ಸುಮ್ಮನಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News